ಕಾಂಗ್ರೆಸ್ನ ಐ.ಯು. ಪಠಾಣ ನಾಮಪತ್ರ ತಿರಸ್ಕರಿಸಿ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.25
ಹಾವೇರಿ ನಗರಸಭೆಯ ವಾರ್ಡ್ ನಂ. 12ಕ್ಕೆ ಕಾಂಗ್ರೆಸ್ ಪಕ್ಷದಿಂದ ಐ.ಯು. ಪಠಾಣ ಅಪೂರ್ಣ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ನಾಮಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಲ್ಲದೇ ರಿಟರ್ನಿಂಗ್ ಅಧಿಕಾರಿಗಳ ಕೈಪಿಡಿ ನಿಯಮ 6- 10 ಇ ನಿಯಮಕ್ಕೆ ವಿರುದ್ಧವಾಗಿ ಸುಳ್ಳು ಘೋಷಣಾ ಪತ್ರ ಸಲ್ಲಿಸಿದ್ದಾರೆ. ಕೂಡಲೇ ಅವರ ನಾಮಪತ್ರ ತಿರಸ್ಕರಿಸುವಂತೆ 4ನೇ ವಾರ್ಡ್ನ ಪಕ್ಷೇತರ ಅಭ್ಯರ್ಥಿ ವೆಂಕಟೇಶ ಇಟಗಿ, ಜಿಲ್ಲಾಧಿಕಾರಿಗೆ ಹಾಗೂ ರಿಟರ್ನಿಂಗ್ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಅಸಲಿ ಮಾಹಿತಿ ಮುಚ್ಚಿಟ್ಟು ತಪ್ಪು ಮಾಹಿತಿಯ ಘೋಷಣಾ ಪತ್ರ ಸಲ್ಲಿಸಿದ್ದಾರೆ. ಅಲ್ಲದೇ ಅಭ್ಯರ್ಥಿ ಪಠಾಣ ಮೇಲೆ ಐಪಿಸಿ ಕಲಂ 143, 147, 148, 354, 448, 295, 504, 506 ಮತ್ತು ದೌರ್ಜನ್ಯ ತಡೆ ಕಾಯ್ದೆ-1989ರ ಕಲಂ 3(1)(್ಢ)(್ಢ್ಝ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವುಗಳನ್ನು ಪ್ರಮಾಣಪತ್ರ ಅಥವಾ ಘೋಷಣಾ ಪತ್ರದ 3ನೇ ಭಾಗದಲ್ಲಿ ತೋರಿಸದೇ ಮುಚ್ಚಿಟ್ಟಿದ್ದಾರೆ. ಕಾರಣ ಅವರ ನಾಮಪತ್ರ ತಿರಸ್ಕರಿಸುವಂತೆ ಒತ್ತಾಯಿಸಿದರು.
ಪ್ರಮಾಣ ಪತ್ರದ 4ನೇ ಕಲಂನ 5ನೇ ಕ್ರಮಾಂಕದಲ್ಲಿ ಟ್ರ್ಯಾಕ್ಟರ್ ಎಂದು ತಿಳಿಸಿದ್ದು, ಅದರ ನೋಂದಣಿ ಸಂಖ್ಯೆ ಹಾಗೂ ವಾಹನ ಖರೀದಿಸಿದ ಬಗ್ಗೆ ಮಾಹಿತಿ ಒದಗಿಸಿಲ್ಲ. ತಾವು ಹೊಂದಿರುವ ಆಭರಣಗಳನ್ನು ಕೇವಲ 90 ಗ್ರಾಂ ಎಂದು ತೋರಿಸಲಾಗಿದೆಯೇ ಹೊರತು ಅದರ ಮಾರುಕಟ್ಟೆ ಮೌಲ್ಯ ಬಚ್ಚಿಡಲಾಗಿದೆ. ಅಲ್ಲದೇ ತಮ್ಮ ಸ್ಥಿರಾಸ್ತಿ ಕುರಿತಂತೆ ಬೇಕಾಬಿಟ್ಟಿ ಮಾಹಿತಿ ನೀಡಲಾಗಿದೆ.
ಕಾರಣ ಪಠಾಣ ಅವರ ನಾಮಪತ್ರ ತಿರಸ್ಕರಿಸಿ ಅವರ ಮೇಲೆ 6- 10 (ಬಿ) ಆಧಾರದಲ್ಲಿ ಕ್ರಮ ಜರುಗಿಸುವಂತೆ ಹಾಗೂ ತಮ್ಮ ವಿದ್ಯಾರ್ಹತೆ ಕುರಿತಂತೆಯೂ ಮಾಹಿತಿ ಒದಗಿಸಿಲ್ಲ. ಅಲ್ಲದೇ ರಿಟರ್ನಿಂಗ್ ಅಧಿಕಾರಿಗಳ ಮಾಹಿತಿ ಕೈಪಿಡಿ ಅನ್ವಯ ಅಭ್ಯರ್ಥಿ ಯಾವುದೇ ಕಾಲಂಗಳನ್ನು ಹಾಗೆಯೇ ಕೈಬಿಡದೇ ಅನ್ವಯಿಸದಿದ್ದಲ್ಲಿ ಅದನ್ನು ಭರ್ತಿ ಮಾಡುವಂತೆ ಹೌದು ಅಥವಾ ಇಲ್ಲ ಎಂಬ ಕುರಿತಂತೆ ಮಾಹಿತಿ ಒದಗಿಸುವುದು ಕಡ್ಡಾಯವಾಗಿದೆ.
ಆದರೆ, ಪಠಾಣ ಅವರ ನಾಮಪತ್ರದಲ್ಲಿ ಬಹುತೇಕ ಕಡೆಗಳಲ್ಲಿ ಮಾಹಿತಿ ನೀಡದೆ ಖಾಲಿ ಬಿಡಲಾಗಿದೆ. ಕಾರಣ ಅವರ ನಾಮಪತ್ರ ತಿರಸ್ಕರಿಸುವುದಲ್ಲದೇ, ನಾಮಪತ್ರಗಳಲ್ಲಿನ ಇಂಥ ಹಲವಾರು ತಪ್ಪುಗಳನ್ನು ಆರ್ಓ ವಿ.ಎಂ. ಸೂರಣಗಿ ಅವರ ಗಮನಕ್ಕೆ ತಂದಾಗ್ಯೂ ಕ್ರಮ ಜರುಗಿಸದಿರುವ ಕುರಿತಂತೆ ಸೂರಣಗಿ ಅವರ ಮೇಲೆಯೂ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.
ಸರ್ಕಾರದ ಉದ್ದೇಶದಂತೆ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಕೈಯಲ್ಲಿ ಅಧಿಕಾರ ಸಿಗುವುದು ಬೇಡ ಎಂಬ ಅಂಶದ ಸ್ಪಷ್ಟ ಉಲ್ಲಂಘನೆ ಇದಾಗಿದ್ದು, ಕೂಡಲೇ ಕರ್ತವ್ಯ ಲೋಪದ ಆಧಾರದ ಮೇಲೆ ಸೂರಣಗಿ ಅವರನ್ನು ಚುನಾವಣಾ ಕರ್ತವ್ಯದಿಂದ ತೆರವುಗೊಳಿಸಿ ಅವರ ಮೇಲೆಯೂ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ನ್ಯಾಯವಾದಿ ಪರಶುರಾಮ ಅಗಡಿ ಇದ್ದರು.