ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಎಸ್‌ವೈ ಜನಪರ ಕಾರ್ಯ ಕೆಜೆಪಿ ಗೆಲವಿಗೆ ಶ್ರೀರಕ್ಷೆ

Rashmi Kasaragodu
Updated On : 26 Feb 2013, 10:49 am

ಬಿ.ಕೆ. ಮಹೇಂದ್ರ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 25
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೈಗೊಂಡಿರುವ ಜನಪರ ಕಾರ್ಯಗಳೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಗೆಲವಿಗೆ ಶ್ರೀರಕ್ಷೆಯಾಗಲಿದೆ.
ಹೀಗೆಂದು ವಿಶ್ವಾಸ ವ್ಯಕ್ತಪಡಿಸಿದವರು ಮಾಜಿ ಸಚಿವ, ಕೆಜೆಪಿ ಮುಖಂಡ ಸಿ.ಎಂ. ಉದಾಸಿ ಅವರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ 'ಕನ್ನಡಪ್ರಭ' ನಡೆಸಿದ ವಿಶೇಷ ಸಂದರ್ಶನದಲ್ಲಿ ಒಟ್ಟಾರೆ ಹೇಳಿದ್ದಿಷ್ಟು.
ಬಂಕಾಪುರ ಹಾಗೂ ಸವಣೂರು ಪುರಸಭೆ ಹೊರತುಪಡಿಸಿ ಹಾವೇರಿಯ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಕೆಜೆಪಿ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಕೆಜೆಪಿ ಬಹುಮತ ಪಡೆಯುವುದು ಶತಃಸಿದ್ಧ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅನುದಾನದ ಹೊಳೆ: ಹಳ್ಳಿಯಿಂದ ನಗರ ಪ್ರದೇಶದ ವರೆಗೆ ನಾಡಿನ ಉದ್ದಗಲಕ್ಕೂ ವಾಸವಾಗಿರುವ ಜನಸಾಮಾನ್ಯರಿಗೆ ಮೂಲ ಸೌಕರ್ಯ ಒದಗಿಸಬೇಕೆಂಬ ಉದ್ದೇಶದಿಂದ ಬಿಎಸ್‌ವೈ ಸಿಎಂ ಆಗಿದ್ದ ಸಂದರ್ಭ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಿಗೆ ಅನುದಾನದ ಹೊಳೆಯನ್ನೇ ಹರಿಸಿದ್ದಾರೆ.
ಇದರಿಂದಾಗಿಯೇ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ರಸ್ತೆ ಹಾಗೂ ವಿದ್ಯುತ್ ವ್ಯವಸ್ಥೆಯಿಂದ ಈವರೆಗೂ ವಂಚಿತವಾಗಿದ್ದ ಹಳ್ಳಿ ಹಾಗೂ ಗ್ರಾಮಗಳು ನಾಡಿನ ಭೂಪಟದಲ್ಲಿ ಕಾಣಿಸಿಕೊಳ್ಳುವಂತಾಗಿವೆ. ಸ್ವಾತಂತ್ರ್ಯ ಸಿಕ್ಕ ನಂತರ ರಾಜ್ಯದ ಇತಿಹಾಸದಲ್ಲೇ ಜಿಲ್ಲಾಕೇಂದ್ರ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗೆ ಕೋಟ್ಯಂತರ ರು. ಅನುದಾನ ಬಿಡುಗಡೆಯಾಗಿರಲಿಲ್ಲ. ಬಿಎಸ್‌ವೈ ಮಾಡಿದ್ದಾರೆ.
70ಕ್ಕೂ ಹೆಚ್ಚು: ರಾಜ್ಯದ 70ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂಡರ್ ಗ್ರೌಂಡ್ ಒಳಚರಂಡಿ ಕಾಮಗಾರಿಗೆ ಬಿಎಸ್‌ವೈ ಚಾಲನೆ ನೀಡುವ ಮೂಲಕ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಆ ಭಾಗದಲ್ಲಿ ವಾಸವಾಗಿದ್ದ ಜನರು ನಿತ್ಯದ ಕರ್ಮಾದಿಗಳಿಗೆ ಹೊರವಲಯ ಆಶ್ರಯಿಸಬೇಕಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಯಡಿಯೂರಪ್ಪ, ಈ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಿದ್ದಾರೆ. ನಾಡಿನ ಜನತೆ ಈ ಕೆಲಸವನ್ನು ಎಂದಿಗೂ ಮರೆಯಲಾರರು.
ಮಾನದಂಡವಲ್ಲ: ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಈ ಚುನಾವಣೆ ವಿಧಾನಸಭೆ ಚುನಾವಣೆಗೆ ಮಾನದಂಡವಲ್ಲ. ಕೆಜೆಪಿ, ಬಿಜೆಪಿ, ಕಾಂಗ್ರೆಸ್, ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಪ್ರತಿಯೊಂದು ವಾರ್ಡ್‌ನಲ್ಲಿ 450ರಿಂದ 1,200 ಮತದಾರರು ವಾಸವಾಗಿದ್ದಾರೆ.
ಇಷ್ಟೊಂದು ಸಣ್ಣ ಪ್ರಮಾಣದ ಮತದಾರರಿರುವ ವಾರ್ಡ್‌ಗಳಲ್ಲಿಯೂ ಐದಾರು ದೊಡ್ಡ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದರಿಂದ ಈ ಚುನಾವಣೆ ಫಲಿತಾಂಶ ವಿಧಾನಸಭೆ ಚುನಾವಣೆಗೆ ಮಾನದಂಡವಾಗಲು ಸಾಧ್ಯವಿಲ್ಲ.
ರು. 30 ಕೋಟಿ: ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಬಿಎಸ್‌ವೈ ಸಿಎಂ ಆಗಿದ್ದ ಸಂದರ್ಭ ಪ್ರತಿಯೊಂದು ಜಿಲ್ಲಾ ಕೇಂದ್ರಕ್ಕೆ ರು. 30 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಆದ್ದರಿಂದಲೇ ಅಲ್ಲಿನ ಪ್ರಮುಖ ರಸ್ತೆಗಳಿಂದ ಹಿಡಿದು ಒಳರಸ್ತೆಗಳು ಹೊಳಪು ಪಡೆದುಕೊಂಡಿವೆ.
ಬಿಎಸ್‌ವೈ ಟಾರ್ಗೆಟ್!
ಬಿಎಸ್‌ವೈ ಸಿಎಂ ಆಗಿದ್ದ ಸಂದರ್ಭ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಅನುದಾನ ಹಾಗೂ ಆಯಾ ಪ್ರದೇಶಗಳಲ್ಲಾಗಿರುವ ಅಭಿವೃದ್ಧಿ ಕಾಮಗಾರಿಗಳು ಕೆಜೆಪಿ ಅಭ್ಯರ್ಥಿಗಳ ಕೊರಳಿಗೆ ಜಯದ ಮಾಲೆ ಹಾಕುವುದು ಸ್ಪಷ್ಟ ಎಂಬುದು ಮನಗಂಡ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ನಾಯಕರು ಯಡಿಯೂರಪ್ಪ ಅವರನ್ನೇ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಪ್ರಜ್ಞಾವಂತ ಮತದಾರ ಯಾರ ಅವಧಿಯಲ್ಲಿ ಯಾವ್ಯಾವ ಕೆಲಸ ಕಾರ್ಯಗಳು ಆಗಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಸ್ಥಳೀಯ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಬಹುಮತದಿಂದ ಆಯ್ಕೆ ಮಾಡುವ ಮೂಲಕ ಎಲ್ಲ ಪಕ್ಷಗಳಿಗೆ ತಕ್ಕಪಾಠ ಕಲಿಸಲು ಜನತೆ ಸಿದ್ಧರಾಗಿದ್ದಾರೆ.
ಸಂಘಟನೆ ಆಗಿಲ್ಲ: ಶಿಗ್ಗಾಂವಿ ಪಟ್ಟಣಕ್ಕೆ ಮಾತ್ರ ಕೆಜೆಪಿಯಿಂದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಾಗಿದೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಾದ್ಯಂತ ಪಕ್ಷದ ಸಂಘಟನೆ ಮಾಡಲು ವಿಳಂಬವಾಗಿದ್ದರಿಂದ ಎಲ್ಲೆಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಾಗಿಲ್ಲ. ಬಂಕಾಪುರ ಹಾಗೂ ಸವಣೂರು ಪುರಸಭೆಯಲ್ಲಿಯೂ ಇದೇ ಸ್ಥಿತಿ ಇರುವುದರಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿಲ್ಲ ಎಂದರು.



ಬದಲಾವಣೆಗೆ ಬೆಂಬಲಿಸಿ
ನಾಡಿನ ಶ್ರೀಸಾಮಾನ್ಯರಿಗೂ ಮೂಲಸೌಕರ್ಯ ಒದಗಿಸಿಕೊಡುವ ಮೂಲಕ ಮಾದರಿ ರಾಜ್ಯವನ್ನಾಗಿಸಬೇಕೆಂಬ ಕನಸು ಹೊತ್ತಿರುವ ಕರ್ನಾಟಕ ಜನತಾ ಪಕ್ಷವನ್ನೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರ ಪ್ರಭುಗಳು ಬಹುಮತದಿಂದ ಆಯ್ಕೆ ಮಾಡುವ ಮೂಲಕ ಬದಲಾವಣೆಗೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ಪ್ರಸಕ್ತ ಚುನಾವಣೆಯಿಂದಲೇ ಜನರ ಆರ್ಶೀವಾದ ಪಡೆದು ವಿಧಾನಸಭೆ ಚುನಾವಣೆಯನ್ನು ಎದುರಿಸಿ ಆಡಳಿತ ಚುಕ್ಕಾಣಿ ಹಿಡಿಯುವ ಸಂಪೂರ್ಣ ವಿಶ್ವಾಸ ತಮಗಿದೆ. ಇದು ಕೇವಲ ಕೆಜೆಪಿ ನಾಯಕರುಗಳ, ಕಾರ್ಯಕರ್ತರ ವಿಶ್ವಾಸವಲ್ಲ. ಇಡೀ ನಾಡಿನ ಜನತೆಯ ಆಶಯವಾಗಿದೆ.


ಅರ್ಹರಿಗೆ ಟಿಕೆಟ್
ಸ್ಥಳೀಯ ಸಂಸ್ಥೆ ಚುನಾವಣೆಗೆ ಕೆಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಕಳೆದ ಬಾರಿ ಯಾವದೇ ಪಕ್ಷದಿಂದ ಸ್ಪರ್ಧಿಸಿದ್ದಾರೆಂಬ ಮಾಹಿತಿ ಕಲೆ ಹಾಕಲಾಗಿದೆ. ಆಯ್ಕೆಯಾದ ಬಳಿಕ ವಾರ್ಡ್‌ಗಳ ಅಭಿವೃದ್ಧಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಿದ್ದಾರೆ ಎಂಬುದು ಪರಿಗಣಿಸಿಯೇ ಕೆಜೆಪಿ ಟಿಕೆಟ್ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement