ಸಾಮೂಹಿಕ ವಿವಾಹದಿಂದ ವೆಚ್ಚಕ್ಕೆ ಕಡಿವಾಣ
ಹಾವೇರಿ: ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚ ಕಡಿಮೆಯಾಗಿ ಬಡವರಿಗೆ ಹೆಚ್ಚು ಅನುಕೂಲವಾಗುತ್ತದೆ. ಆದ್ದರಿಂದ ಇಂದಿನ ದಿನಗಳಲ್ಲಿ ಸಾಮೂಹಿಕ ವಿವಾಹಗಳನ್ನು ಉತ್ತೇಜಿಸಬೇಕಿದೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ನುಡಿದರು.
ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಮಾಲತೇಶ ಸ್ವಾಮೀಯ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ವಧು-ವರಗಳಿಗೆ ಆಶೀರ್ವದಿಸಿ ಮಾತನಾಡಿ, ಸಾಮಾಜಿಕ ಸಾಮರಸ್ಯಕ್ಕೆ ತಳಹದಿಯಾಗಿರುವ ಸಾಮೂಹಿಕ ವಿವಾಹಗಳಲ್ಲಿ ಹಳ್ಳಿಯ ಜನ ಹೆಚ್ಚಾಗಿ ಭಾಗವಹಿಸಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಶ್ರೀಗಳು ಮಾತನಾಡಿ, ಕಬ್ಬೂರು ಗ್ರಾಮಸ್ಥರು 25 ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಇತರರಿಗೆ ಮಾದರಿಯಾಗಿದೆ. ಸಮಾಜಕ್ಕೆ ಒಳಿತನ್ನು ಬಯಸಲು ಇಂಥ ಕಾರ್ಯಗಳನ್ನು ಮಾಡುತ್ತಿರುವ ಮಾಲತೇಶ ಸ್ವಾಮೀ ಸೇವಾ ಸಮಿತಿ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ಕೂಡಲದ ಗುರುನಂಜೇಶ್ವರ ಶ್ರೀಗಳು ವಹಿಸಿದ್ದರು. ಮಾಜಿ ಸಚಿವ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ರುದ್ರಪ್ಪ ಲಮಾಣಿ, ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಎಸ್.ಆರ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಶೇಖರಗೌಡ ಗಿರಿಗೌಡ್ರ ಮಾತನಾಡಿದರು.
ಎಲ್.ಎಸ್. ಕಂಬಳಿ, ಶಿವಕುಮಾರ ತಾವರಗಿ, ಸಿ.ಎಸ್. ಕೂಕುನಗೌಡ್ರ, ಕರಬಸಪ್ಪ ಹೊಸಳ್ಳಿ, ಉಮೇಶ ಬಳ್ಳಾರಿ, ಮೋಹನದಾಸ, ಇತರರು ಉಪಸ್ಥಿತರಿದ್ದರು.
ಶಿವಾನಂದಯ್ಯ ವಿರಕ್ತಮಠ ಸ್ವಾಗತಿಸಿದರು. ರವೀಂದ್ರ ಚಿನ್ನಿಕಟ್ಟಿ ವಂದಿಸಿದರು. ಬಸವರಾಜ ಬೆಳ್ಳಕ್ಕಿ ಹಾಗೂ ಹಿರಿಯ ನ್ಯಾಯವಾದಿ ಎನ್.ಎಂ. ಬೆಳ್ಳಕ್ಕಿ ಉಪಸ್ಥಿತರಿದ್ದರು.