ಹೆಚ್ಚುವರಿ ಅನುದಾನ ನೀಡಿದ್ದೇಕೆ?
ಹಾವೇರಿ: ಸರ್ಕಾರಿ ಶಾಲೆಯ ಒಂದು ಕೊಠಡಿ ಕಟ್ಟಲು ಸರ್ಕಾರ ನಿಗದಿಪಡಿಸಿರುವುದು ರು. 4.60 ಲಕ್ಷ. ಆದರೆ, ಹಾನಗಲ್ಲ ತಾಲೂಕಿನಲ್ಲಿ ಕಟ್ಟಡಕ್ಕೆ ಹಣದ ಕೊರತೆ ಇದೆ ಎಂದು ಶಾಸಕರ ಅನುದಾನದಲ್ಲಿ ರು. 1 ಲಕ್ಷ ಹೆಚ್ಚುವರಿ ಅನುದಾನ ನೀಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿರುವ ಜಿಪಂ ಸದಸ್ಯ ಬಸವರಾಜ ಹಾದಿಮನಿ, ಶಾಸಕರ ಅನುದಾನ ಸಮರ್ಪಕ ಬಳಕೆ ಹಾಗೂ ಸರ್ಕಾರಿ ಹಣ ದುರುಪಯೋಗದ ಕುರಿತಂತೆ ಜಿಪಂ ಎಚ್ಚರಿಕೆ ವಹಿಸುವಂತೆ ಆಗ್ರಹಿಸಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಶ್ನೆಗೆ ತಲೆ ಬಾಗಿದ ಸಭೆ: ಜನರಿಂದ ಸಂಗ್ರಹಿಸಿದ ಹಣ ಜನರಿಗೆ ಸಮರ್ಪಕವಾಗಿ ಬಳಕೆಯಾಗಬೇಕು. ಸರ್ಕಾರದ ನಿರ್ದೇಶನದಂತೆ ರು. 4.60 ಲಕ್ಷದಲ್ಲಿ ಶಾಲೆಯ 1 ಕಟ್ಟಡ ಕಟ್ಟಬಹುದಾಗಿದೆ. ಆದರೆ, ಈ ಹಣ ಸಾಕಾಗುತ್ತಿಲ್ಲ ಎಂದರೇ ಏನರ್ಥ. ಇದಕ್ಕೆ ಹೆಚ್ಚುವರಿ ಹಣ ನೀಡುವುದು ದುರುಪಯೋಗವಲ್ಲವೇ ಎಂದು ಪ್ರಶ್ನಿಸುವ ಮೂಲಕ ವೇದಿಕೆಯಲ್ಲಿದ್ದವರನ್ನೇ ತಬ್ಬಿಬ್ಬುಗೊಳಿಸಿದರು. ಇದಕ್ಕೆ ಯಾರೊಬ್ಬರೂ ಉತ್ತರಿಸುವ ಗೋಜಿಗೂ ಹೋಗದೇ ಇಡೀ ಸಭಾಸದರವೇ ಸುಮ್ಮನಾಗುವ ಮೂಲಕ ತಮ್ಮ ಅಸಹಾಯಕತೆ ಪ್ರದರ್ಶಿಸಿದರು.
ಆರೋಗ್ಯ ಕುರಿತು ನಿರ್ಲಕ್ಷ್ಯ: ಜಿಲ್ಲೆಯಲ್ಲಿನ ಆರೋಗ್ಯ ಸ್ಥಿತಿ ಕುರಿತಂತೆ ಜಿಪಂ ಸದಸ್ಯ ಶಿವಕುಮಾರ ಮುದ್ದಪ್ಪಳವರ ಮಾತನಾಡಿ, ಜಿಲ್ಲೆಯಲ್ಲಿ ಹಿಂದಿನ ಸ್ಥಿತಿಗೂ ಪ್ರಸಕ್ತ ಸ್ಥಿತಿಗೂ ಭಿನ್ನವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಇದರಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಗ್ರಾಮೀಣ ಭಾಗಗಳಲ್ಲಿ ಗ್ರಾಪಂಗಳು ಸ್ವಚ್ಛತೆಗೆ ಆದ್ಯತೆ ಕೊಡುತ್ತಿಲ್ಲ. ಅಲ್ಲದೇ ಆರೋಗ್ಯ ಇಲಾಖೆ ಕೈಕಟ್ಟಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಾಥ್ ನೀಡಿದ ಶಶಿಧರ ಹೊನ್ನಣ್ಣನವರ ಗ್ರಾಮೀಣ ಭಾಗದಲ್ಲಿನ ಮನೆಗಳಿಗೆ ಹೋದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇನ್ನು ಆರೋಗ್ಯ ಹೇಗೆ ಸಾಧ್ಯ. ಕೂಡಲೇ ಫಾಗಿಂಗ್ ಬಳಕೆಗೆ ಕ್ರಮ ಜರುಗಿಸಿ. ಅವುಗಳ ಬಳಕೆ ಕುರಿತಂತೆ ಬಿಲ್ ಮಾತ್ರ ಹಾಕಲಾಗುತ್ತಿದೆ. ಬಳಕೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಕಾಳಜಿ: ಅಧ್ಯಕ್ಷ ಶಂಕ್ರಣ್ಣ ಮಾತನವರ, ಡೆಂಘೀ ಜ್ವರ ನಿವಾರಣೆಯಾಗಿದೆಯೇ? ಈ ಹಿಂದಿನ ಪ್ರಕರಣಗಳೆಲ್ಲ ಸುಖಾಂತ್ಯವಾಗಿವೆಯೇ? ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಪ್ರಶ್ನಿಸಿದರು. ಇದಕ್ಕುತ್ತರಿಸಿದ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಹಿಂದಿನ ಬಹುತೇಕ ಪ್ರಕರಣಗಳು ಸುಖಾಂತ್ಯಗೊಂಡಿವೆ. ಆದರೆ, 2013ರ ಜನವರಿಯಿಂದ ಇತ್ತೀಚೆಗೆ ಮತ್ತೆ 12 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಮತ್ತೆ ರಾಣಿಬೆನ್ನೂರು ಮೊದಲ ಸ್ಥಾನದಲ್ಲಿದೆ. ಈ ಕುರಿತಂತೆ ಸಾರ್ವಜನಿಕರಲ್ಲಿ ಆರೋಗ್ಯ ಕಾಳಜಿ ಇನ್ನೂ ಹೆಚ್ಚಾಗಿ ಮೂಡಿಸಲಾಗುತ್ತಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿಪಂ ಸದಸ್ಯ ಸಂತೋಷ ಪಾಟೀಲ ಕೇವಲ ಸಾರ್ವಜನಿಕರ ಹಾಗೂ ಚರಂಡಿಗಳನ್ನು ಸ್ವಚ್ಛವಾಗಿಟ್ಟರೆ ಸಾಲದು. ಸರ್ಕಾರಿ ನೀರಿನ ಜಲಾಗಾರ ಹಾಗೂ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಟ್ಯಾಂಕ್ಗಳಿಗೆ ಮುಚ್ಚಳ ಹಾಗೂ ಅವುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕಿದೆ. ಈ ಕುರಿತಂತೆ ಗ್ರಾಪಂಗಳಿಗೆ ಸೂಕ್ತ ನಿದೇಶನ ನೀಡಬೇಕು. ಗ್ರಾಮೀಣದಲ್ಲಿ ಚರಂಡಿ ಸ್ವಚ್ಛತೆ ಇಲ್ಲದ್ದರಿಂದ ರಾಣಿಬೆನ್ನೂರು ತಾಲೂಕಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ದೂರಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿ, ಸರ್ಕಾರಿ ನೀರಿನ ತೊಟ್ಟಿಗಳಿಗೆ ಟ್ಯಾಪ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಟಿಸಿ ಅಳವಡಿಕೆಗೆ ತಾಕೀತು: ಹೆಸ್ಕಾಂ ಕಾರ್ಯ ಕುರಿತಂತೆ ಜಿಪಂ ಅಬೀದಾಭಿ ನದಾಫ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಹೆಸ್ಕಾಂ ಅಧಿಕಾರಿಗಳು ಸಮರ್ಪಕ ಕಾರ್ಯನಿರ್ವಹಿಸುತ್ತಿಲ್ಲ. ಹಾನಗಲ್ಲ ತಾಲೂಕಿನ ಮಾರನಬೀಡದಲ್ಲಿ ಪ್ರತಿ 2-3 ತಿಂಗಳಿಗೊಮ್ಮೆ ಟಿಸಿ ಸುಡುತ್ತಿವೆ. ಹೆಸ್ಕಾಂ ರೈತವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದರು. ಜಿಪಂ ಅಧ್ಯಕ್ಷರು ಸಂಭಂದಿಸಿದ ಕಡೆ ಉತ್ತಮ ಟಿಸಿ ಅಳವಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕ್ರೀಡಾ ಸಾಮಗ್ರಿ ಹಾಗೂ ಡೆಸ್ಕ್ ವಿತರಣೆ ಕುರಿತಂತೆ ಜಿಪಂ ಸದಸ್ಯೆ ಬಸಮ್ಮ ಅಬಲೂರ ಸಭೆಯ ಗಮನ ಸೆಳೆದು ಎಲ್ಲ ಕ್ಷೇತ್ರಗಳಿಗೂ ಸಮರ್ಪಕ ಹಂಚಿಕೆಗೆ ಒತ್ತಾಯಿಸಿದರು. ಸದಸ್ಯರು ಒಪ್ಪಿಗೆ ನೀಡಿದರು. ಸಾರಿಗೆ, ಶಿಕ್ಷಣ ಇಲಾಖೆ, ಆರೋಗ್ಯ, ಪಂಚಾಯತ್ ರಾಜ್, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ ಅಧ್ಯಕ್ಷತೆ ವಹಿಸಿದ್ದರು. ಉಪಕಾರ್ಯದರ್ಶಿ ಗೋವಿಂದಸ್ವಾಮಿ, ವಿಪ ಸದಸ್ಯ ಶಿವರಾಜ ಸಜ್ಜನರ, ಜಿಪಂ ಉಪಾಧ್ಯಕ್ಷೆ, ಸದಸ್ಯ ಪದ್ಮನಾಭ ಕುಂದಾಪುರ, ಸ್ಥಾಯಿ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.
ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಇದರಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಗ್ರಾಮೀಣ ಭಾಗಗಳಲ್ಲಿ ಗ್ರಾಪಂಗಳು ಸ್ವಚ್ಛತೆಗೆ ಆದ್ಯತೆ ಕೊಡುತ್ತಿಲ್ಲ. ಅಲ್ಲದೇ ಆರೋಗ್ಯ ಇಲಾಖೆ ಕೈಕಟ್ಟಿ ಕುಳಿತಿದೆ.
ಶಿವಕುಮಾರ ಮುದ್ದಪ್ಪಳವರ,
ಜಿಪಂ ಸದಸ್ಯ