ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಉತ್ತಮ ಸ್ಥಾನದಿಂದ ಮೌಢ್ಯ ತೊಲಗಿಸಿ

Rashmi Kasaragodu
Updated On : 27 Feb 2013, 11:06 am

ಹಾವೇರಿ: ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಸಾಮಾಜಿಕ ರಂಗಗಳಲ್ಲಿ ಸಮಾನ ಸ್ಥಾನ-ಮಾನ ಪಡೆದು ಸಮಾಜದ ಮೌಢ್ಯ ಹೋಗಲಾಡಿಸಿ, ಸಮಾಜದಲ್ಲಿನ ವಿದ್ಯಾವಂತರು ಹಾಗೂ ಚಿಂತಕರು ಯುವಕರಿಗೆ ಮಾರ್ಗದರ್ಶನ ಮಾಡಬೇಕೆಂದು ಮಾಜಿ ಸಚಿವ ಸಿ.ಎಂ. ಉದಾಸಿ ಕರೆ ನೀಡಿದರು.
ಬಂಜಾರಾ ರಕ್ಷಣಾ ವೇದಿಕೆ, ಕರ್ನಾಟಕ ಲಂಬಾಣಿ ಬಂಜಾರಾ ಕಲ್ಯಾಣ ಸಂಘ ಹಾಗೂ ಅಖಿಲ ಭಾರತ ಬಂಜಾರಾ ಸಂಘಗಳ ಆಶ್ರಯದಲ್ಲಿ ಹಾನಗಲ್ಲ ಕ್ರೀಡಾಂಗಣದಲ್ಲಿ ನಡೆದ ಸೇವಾಲಾಲರ 274ನೇ ಜಯಂತ್ಯುತ್ಸವ ಹಾಗೂ ಹಾವೇರಿ ಜಿಲ್ಲಾ ಬಂಜಾರಾ(ಲಂಬಾಣಿ) ಜನಜಾಗೃತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮದ್ಯ ಸೇವನೆ ತ್ಯಜಿಸಿ: ಬಂಜಾರಾ ಸಮಾಜದ ಧರ್ಮಗುರು ಸೇವಾಲಾಲ್ ಅವರ ಸಂದೇಶ ಹಾಗೂ ಉಪದೇಶಗಳನ್ನು ಪಾಲಿಸುವ ಅವಶ್ಯಕತೆ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಸಮಾಜದ ಜನರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮದ್ಯ ಸೇವನೆ, ವ್ಯಸನ ತ್ಯಜಿಸಬೇಕೆಂದರು.
ಆರ್ಥಿಕ ಸಬಲರಾಗಿ: ಈ ಬದಲಾವಣೆಯಿಂದ ಕುಟುಂಬ ಹಾಗೂ ಸಮಾಜದ ಆರ್ಥಿಕ ಸುಧಾರಣೆಯಾಗಲಿದೆ. ಕೃಷಿಯಲ್ಲಿರುವ ಬಾಂಧವರು ಕೊಳವೆ ಬಾವಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲು ಸರ್ಕಾರ ರು. 5 ಲಕ್ಷವರೆಗೆ ಸಹಾಯಧನ ನೀಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ವಾಣಿಜ್ಯ ಬೆಳೆ ಬೆಳೆಯಬೇಕೆಂದು ಸಲಹೆ ನೀಡಿದರು.
ಉನ್ನತ ಹುದ್ದೆ ಹೊಂದಿ: ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಬಂಜಾರಾ ಸಮಾಜದ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಿ ಸ್ವಾವಲಂಬಿಗಳಾಗಲು ಪ್ರೋತ್ಸಾಹ ನೀಡುವ ಮೂಲಕ ಸಮಾಜದ ಹಿರಿಯರು ಉತ್ತಮ ಬಳುವಳಿ ನೀಡಬೇಕು. ಹಿಂದೆ ಸಮಾಜ ಆರ್ಥಿಕ ಕಷ್ಟದ ಸ್ಥಿತಿಯಲ್ಲಿತ್ತು. ಇಂದು ಪರಿಸ್ಥಿತಿ ಸುಧಾರಿಸುತ್ತಿದೆ. ಈ ಬದಲಾವಣೆಯಾಗಲು, ತಾಯಂದಿರ ಶ್ರಮ, ಶ್ರದ್ಧೆ ಹಾಗೂ ಶಿಕ್ಷಣಕ್ಕೆ ಅವರು ನೀಡಿದ ಮಹತ್ವ ಕಾರಣವಾಗಿದೆ. ಈ ಶ್ರೇಯಸ್ಸು ಮಾತೆಯರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳು ಕೇವಲ ಪದವಿ ಮಟ್ಟಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸದೇ, ಸ್ನಾತಕೋತ್ತರ ಹಾಗೂ ಸಂಶೋಧನಾ ಹಂತದಲ್ಲಿ ತರಬೇತಿ ಪಡೆದು ಉನ್ನತ ಹುದ್ದೆಗೆರಬೇಕೆಂದರು. ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಸೇವಾಲಾಲರ ಭಾವಚಿತ್ರ ಅನಾವರಣಗೊಳಿಸಿದರು. ಕೂಡಲದ ಗುರುನಂಜೇಶ್ವರ ಶ್ರೀ, ಚಿತ್ರದುರ್ಗದ ಸರ್ಧಾರ ಸೇವಾಲಾಲ್ ಶ್ರೀ, ಬೆಳ್ಳಟ್ಟಿಯ ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಮಾಜದ ಜಿಲ್ಲಾ ಮುಖಂಡ ಈರಪ್ಪ ಲಮಾಣಿ ಹಾಗೂ ಬಸವಂತ ನಾಯ್ಕ ಮಾತನಾಡಿದರು. ವಿಧಾನಸಭೆ ಮಾಜಿ ಉಪ ಸಭಾಪತಿ ಮನೋಹರ ತಹಸೀಲ್ದಾರ, ಮಾಜಿ ಸಚಿವ ಎಚ್.ಡಿ. ಲಮಾಣಿ, ಮಾಜಿ ಶಾಸಕ ರುದ್ರಪ್ಪ ಲಮಾಣಿ, ಉತ್ತರ ಕರ್ನಾಟಕ ಬಂಜಾರಾ ಹಿತವರ್ಧಕ ಸಂಘದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ಎಂ.ಕೆ. ಸೊಲಭೇಶ್ವರಪ್ಪ, ಜಿಪಂ ಸದಸ್ಯ ಬಸವರಾಜ ಹಾದಿಮನಿ, ಕಸ್ತೂರೆವ್ವ ವಡ್ಡರ ಹಾಗೂ ಲಲಿತಾ ಜಾಧವ ಪಾಲ್ಗೊಂಡಿದ್ದರು. ಸಮ್ಮೇಳನಕ್ಕೂ ಮುನ್ನ ಕನಕದಾಸ ವೃತ್ತದಿಂದ ತಾಲೂಕು ಕ್ರೀಡಾಂಗಣದವರೆಗೆ ಧರ್ಮಗುರು ಸೇವಾಲಾಲರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.



ಶಿಕ್ಷಣ ಪಡೆಯುವುದರಿಂದ ಕುಟುಂಬ, ಸಮಾಜದ ಆರ್ಥಿಕ ಸುಧಾರಣೆಯಾಗುವುದು. ಕೃಷಿಯಲ್ಲಿರುವ ಬಂಜಾರಾ ಬಾಂಧವರು ಕೊಳವೆ ಬಾವಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲು ಸರ್ಕಾರ ರು. 5ಲಕ್ಷದವರೆಗೆ ಸಹಾಯಧನ ನೀಡುತ್ತಿದೆ. ಅದನ್ನು ಸದುಪಯೋಗಪಡಿಸಿಕೊಂಡು ವಾಣಿಜ್ಯ ಬೆಳೆ ಬೆಳೆದು ಆರ್ಥಿಕ ಸಬಲರಾಗಿರಿ.
ಸಿ.ಎಂ. ಉದಾಸಿ,
ಮಾಜಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement