ರೈಲ್ವೆ ಬಜೆಟ್ 2013 ಜನ ಏನಂತಾರೆ?
ರಾಜ್ಯದ ಪಾಲಿಗೆ ಯಾವುದೇ ಹೊಸ ಯೋಜನೆಗಳಿಲ್ಲದೇ ತೀವ್ರ ಅನ್ಯಾಯವಾಗಿದೆ. ಬಜೆಟ್ ಅಧಿವೇಶನ ಪೂರ್ವದಲ್ಲಿಯೇ ರೇಲ್ವೆ ಸಚಿವರನ್ನು ಖುದ್ದು ಭೇಟಿ ಮಾಡಿ, ಪತ್ರದ ಮೂಲಕ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
-ಶಿವಕುಮಾರ್ ಉದಾಶಿ
ಪ್ರತ್ಯೇಕ ಸ್ಲೀಪರ್ ಬೋಗಿಗಳನ್ನು ಪ್ರಕಟಿಸುವ ಮೂಲಕ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ ಕಲ್ಪಿಸಬೇಕಾಗಿತ್ತು. ದೇಶದಲ್ಲಿ ಜರುಗಿದ ಕೆಲ ಕಹಿ ಘಟನೆ ನೋಡಿದರೇ ಮೆಟ್ರೋ ಪಾಲಿಟಿನ್ ನಗರಗಳಲ್ಲಿ ಅವಶ್ಯಕವೆನಿಸುತ್ತಿವೆ.
-ವಿಜಯಶ್ರೀ ಹಿರೇಮಠ, ಗೃಹಿಣಿ
ಸಿ ದರ್ಜೆ ಪ್ರಯಾಣದ ದರ ಹೆಚ್ಚಿಸದಿರುವುದು ಸ್ವಾಗತಾರ್ಹ. ರಾಜ್ಯದ ಮಟ್ಟಿಗೆ ತುಮಕೂರು-ದಾವಣಗೆರೆ, ಯಲವಿಗಿ-ಗದಗ ಹೊಸ ರೈಲು ಮಾರ್ಗಗಳ ಪ್ರಸ್ತಾಪ ಮಾಡದಿರುವುದು ಈ ಭಾಗದ ಜನರಿಗೆ ಮಾಡಿದ ಮೋಸ.
-ಎಸ್.ಆರ್. ಪಾಟೀಲ್, ಮುಖಂಡ
ಕೇಂದ್ರ ರೇಲ್ವೆ ಬಜೆಟ್ನಲ್ಲಿ ರಾಜ್ಯಕ್ಕೆ ಶೂನ್ಯ ಕೊಡುಗೆ ಬಂದಿದ್ದು, ಕೋಲಾರಕ್ಕೆ ರೇಲ್ವೆ ಕೋಚ್ ನಿರ್ಮಾಣ ಘಟಕ, ಮುಂಬೈಗೆ ಸಂಪರ್ಕ ರೈಲು ನೀಡಿ ಕೈತೊಳೆದುಕೊಳ್ಳಲಾಗಿದೆ. ರಾಜ್ಯ ನಿರ್ಲಕ್ಷ್ಯೀಡಾಗಿದೆ
-ಸೋಮಣ್ಣ ಬೇವಿನಮರದ, ಬಿಜೆಪಿ
ಬಜೆಟ್ನಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕಾಗಿತ್ತು. ವಾಣಿಜ್ಯ ಕೇಂದ್ರಗಳಾದ ಬೆಂಗಳೂರು-ಮುಂಬೈ ನಗರಗಳಿಗೆ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮೂಲಕ ಸಂಪರ್ಕಿಸುವ ರೈಲು ಮಾರ್ಗ ಜೋಡಿಸುವ ಕಾರ್ಯವಾಗಬೇಕಿತ್ತು.
-ಶಂಕರಗೌಡ ಪಾಟೀಲ, ಕೃಷಿಕ
ಹಾವೇರಿ ಜಿಲ್ಲೆಗೆ ಕೇಂದ್ರ ರೇಲ್ವೆ ಬಜೆಟ್ನಲ್ಲಿ ಸೌಲಭ್ಯ ತರುವಲ್ಲಿ ಸಂಸತ್ ಸದಸ್ಯರು ವಿಫಲರಾಗಿದ್ದಾರೆ. ಸರಕು ಸಾಗಣೆ ದರಗಳಲ್ಲಿ ಹೆಚ್ಚಳ, ದಿನಬಳಕೆ ವಸ್ತುಗಳ, ಪೆಟ್ರೋಲ್, ಡೀಸೆಲ್ ದರ ಹೆಚ್ಚಳಕ್ಕೆ ಕಾರಣವಾಗಲಿವೆ.
-ರವಿ ಮೆಣಸಿನಕಾಯಿ, ಹಾವೇರಿ
ನೆನೆಗುದಿಗೆ ಬಿದ್ದಿದ್ದ ಗದಗ- ಹಾವೇರಿ ರೇಲ್ವೆ ಮಾರ್ಗದ ಉನ್ನತೀಕರಣ, ಹಾವೇರಿ ರೇಲ್ವೆ ಸ್ಟೇಷನ್ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಕನಸು ಕನಸಾಗಿಯೇ ಉಳಿದಿದೆ. ಕೇಂದ್ರ ರೇಲ್ವೆ ಬಜೆಟ್ನ್ನು ತೋರಿಕೆಗೆ ಮಂಡಿಸಲಾಗಿದೆ.
-ಮಲ್ಲಣ್ಣ ಸಾತೇನಹಳ್ಳಿ, ಹಾವೇರಿ
ಕೇಂದ್ರ ರೇಲ್ವೆ ಬಜೆಟ್ನಲ್ಲಿ ರಾಜ್ಯಕ್ಕೆ ಹೆಚ್ಚು ಪಾಲು ಸಿಕ್ಕಿದ್ದು, ಕೋಲಾರಕ್ಕೆ ರೇಲ್ವೆ ಕೋಚ್ ನಿರ್ಮಾಣ ಘಟಕ, ರೇಲ್ವೆ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಗದಗ-ವಾಡಿ ರೈಲು ಮಾರ್ಗ ಕೈಗೆತ್ತಿಕೊಂಡಿರುವುದು ಸಂತವಾಗಿದೆ.
-ಪ್ರಕಾಶಗೌಡ ಪಾಟೀಲ, ಕಾಂಗ್ರೆಸ್
ರೇಲ್ವೆ ಬಜೆಟ್ನಲ್ಲಿ ಅಭಿವೃದ್ಧಿ ಚಿಂತನೆ ನಡೆಸದೇ ಬೆಲೆ ಏರಿಕೆ ಗುಮ್ಮ ಎದುರಿಟ್ಟುಕೊಂಡು ಮಂಡಿಸಲಾಗಿದೆ. ಇದರಿಂದಾಗಿ ಈಗಾಗಲೇ ಆಕಾಶಕ್ಕೆ ತಲುಪಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತಷ್ಟು ತುಟ್ಟಿಯಾಗಲಿವೆ.
-ವಾಗೀಶ ಹಿರೇಮಠ, ಖಾಸಗಿ ನೌಕರ
ಕೇಂದ್ರ ರೇಲ್ವೆ ಬಜೆಟ್ ಪರಿಸರ ಸ್ನೇಹಿ ಆಗಬೇಕಿತ್ತು. ಆಗಿಲ್ಲ. ರಾಜ್ಯದ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಬೆರಳೆಣಿಕೆ ಯೋಜನೆ ಯಾವ ಪುರುಷಾರ್ಥಕ್ಕೆ? ಕೇಂದ್ರ ದ. ಭಾರತ ರಾಜ್ಯಗಳ ಹಿತಾಸಕ್ತಿಗೆ ಬದ್ಧವಾಗಬೇಕಿದೆ.
-ವೀರಣ್ಣ ಶೀಲವಂತರ, ಹಾವೇರಿ