ವೈದ್ಯಕೀಯ ನಿರ್ಲಕ್ಷ್ಯ: ವೈದ್ಯಾಧಿಕಾರಿಗೆ ಘೇರಾವ್
ಬ್ಯಾಡಗಿ: ಗರ್ಭಿಣಿಯೊಬ್ಬಳ ಹೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ವೈದ್ಯಕೀಯ ಸಿಬ್ಬಂದಿ ವಿರುದ್ಧ ತಿರುಗಿ ಬಿದ್ದ ಸಾರ್ವಜನಿಕರು ಸಮುದಾಯ ಕೇಂದ್ರದ ಎದುರು ಮಂಗಳವಾರ ಸುಮಾರು ಎರಡು ತಾಸಿಗೂ ಅಧಿಕ ಕಾಲ ಹಠಾತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಕೊಳೂರು ಕ್ಯಾಂಪ್ ನಿವಾಸಿ ಜಬಿನಾಬಾನು ಶಿಕ್ಕಿಲಗಾರ ಎಂಬಾಕೆಯನ್ನು ಸೋಮವಾರ ರಾತ್ರಿ ಕರ್ತವ್ಯ ನಿರತ ವೈದ್ಯೆ ಪುಷ್ಪಾ ಬಣಗಾರ ನೋವು ಕಾಣಿಸಿಕೊಂಡರೂ ಹೆರಿಗೆ ಮಾಡಿಸಲು ಮುಂದಾಗದೇ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆರೋಗ್ಯ ಇಲಾಖೆಯ ತುರ್ತು ವಾಹನ ಲಭ್ಯವಾಗದೇ ಖಾಸಗಿ ವಾಹನವೊಂದರಲ್ಲಿ ದಾವಣಗೆರೆಗೆ ಸಾಗಿಸುವ ಮಾರ್ಗ ಮದ್ಯದಲ್ಲಿ ಜಬೀನಾಬಾನುವಿಗೆ ಸೂಲಗಿತ್ತಿಯೊಬ್ಬರ ನೆರವಿನಲ್ಲಿ ಹೆರಿಗೆ ಮಾಡಿಸಲಾಯಿತು ಎನ್ನಲಾಗಿದ್ದು, ಇದರಿಂದ ಮತ್ತಷ್ಟು ಆಕ್ರೋಶಗೊಂಡ ಸಾರ್ವಜನಿಕರು ವೈದ್ಯಾಧಿಕಾರಿಗಳಿಗೆ ಘೇರಾವ್ ಹಾಕಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ಬಾಬುಸಾಬ್ ಬಡಿಗೇರ ಮಾತನಾಡಿ, ವೈದ್ಯಕೀಯ ಸಿಬ್ಬಂದಿ ಕಾರ್ಯವೈಖರಿ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಯೇ ಬೇಡವೆನಿಸುತ್ತಿದೆ. ಹೆರಿಗೆಗಾಗಿ ದಾಖಲಾಗಿದ್ದ ಜಬೀನಾಬಾನು ತಡರಾತ್ರಿ ದಾವಣಗೆರೆಗೆ ಹೋಗುವಂತೆ ತಿಳಿಸಿದ ವೈದ್ಯರನ್ನು ಕೂಡಲೇ ಅಮಾನತು ಮಾಡುವಂತೆ ಆಗ್ರಹಿಸಿದರು.
ವೈದ್ಯರನ್ನು ಕರೆಸುವಂತೆ ಪಟ್ಟು: ತಪ್ಪಿತಸ್ಥ ಮಹಿಳಾ ವೈದ್ಯರನ್ನು ಹಾಗೂ ಘಟನೆ ಜರುಗಿದರೂ ಸ್ಥಳಕ್ಕಾಗಮಿಸದೇ ತಪ್ಪಿಸಿಕೊಂಡ ತಾಲೂಕು ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಇನ್ನುಳಿದ ವೈದ್ಯರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಕೆಲಕಾಲ ರೋಗಿಗಳಿಗೆ ಚಿಕಿತ್ಸೆ ಲಭಿಸದೇ ಪರದಾಡಬೇಕಾಯಿತು.
ಪ್ರತಿಭಟನೆ ಸುದ್ದಿ ತಿಳಿದು ಸಿಪಿಐ ಚಿಕ್ಕರೆಡ್ಡಿ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿ ಪೊಲೀಸರು ಪರಿಸ್ಥಿತಿ ಕೈ ಮೀರುವುದನ್ನು ನಿಯಂತ್ರಿಸಿದರು. ಇನ್ನೊಂದು ಬಾರಿ ಹೀಗಾಗದಂತೆ ನೋಡಿಕೊಳ್ಳುವ ಭರವಸೆಯೊಂದಿಗೆ ಪ್ರತಿಭಟನೆ ಕೈಬಿಡುವಂತೆ ಮಾಡಿದರು.
ಪ್ರತಿಭಟನೆಯಲ್ಲಿ ಮಹಮ್ಮದ್ಲಿ ಜಿನ್ನಾ ಹಲಗೇರಿ, ಮೋದಿನಸಾಬ ಅಗಸನಹಳ್ಳಿ, ಬಾಬು ಬಾಲಣ್ಣನವರ, ಶಿವಣ್ಣ ಬೂದಿಹಾಳ, ಹುಚ್ಚಪ್ಪ ಗೋಣೆರ, ನಾಗರಾಜ ಮಂಜುಳಾ, ಜಾಫರಸಾಬ ಅಗಸಹಳ್ಳಿ, ಇನ್ನಿತರರು ಪಾಲ್ಗೊಂಡಿದ್ದರು.