ಉತ್ತಮ ಸಂಸ್ಕಾರ ಹೊಂದಿ, ಧರ್ಮ ಮಾರ್ಗ ಅನುಸರಿಸಿ
ಹಿರೇಕೆರೂರು: ಉತ್ತಮ ಸಂಸ್ಕಾರ ಹೊಂದಿ ಧರ್ಮ ಮಾರ್ಗದಲ್ಲಿ ನಡೆದಾಗ ಭವಿಷ್ಯದಲ್ಲಿ ಸಂತಸವನ್ನು ಕಾಣಲು ಸಾಧ್ಯವಿದೆ. ಪರಸ್ಪರರನ್ನು ಅರಿತುಕೊಂಡು ಇಬ್ಬರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿಕೊಂಡಾಗ ದಾಂಪತ್ಯ ಬಲಗೊಳ್ಳುವುದು ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶ್ರೀಗಳು ನುಡಿದರು.
ತಾಲೂಕಿನ ಜೋಕನಾಳ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಧರ್ಮಜಾಗೃತಿ ಸಭೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮೂಹಿಕ ವಿವಾಹಗಳಿಂದ ಅನಗತ್ಯ ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಬಡವರು ಸರಳವಾಗಿ ವಿವಾಹವಾಗಲು ಸಹಕಾರಿಯಾಗುತ್ತದೆ. ಉಳ್ಳವರು ಕೂಡ ಸಾಮೂಹಿಕ ವಿವಾಹವಾಗುವ ಮೂಲಕ ಇತರರಿಗೆ ಮಾದರಿಯಾಗಿ ಬದುಕು ಸಾಗಿಸಲು ಸಾಧ್ಯ ಎಂದರು.
ಶಾಸಕ ಬಿ.ಸಿ. ಪಾಟೀಲ ಮಾತನಾಡಿ, ದಾಂಪತ್ಯದಲ್ಲಿ ಸಣ್ಣಪುಟ್ಟ ವಿರಸದ ಘಟನೆಗಳು ಸಾಮಾನ್ಯ. ಆದರೆ, ಅದನ್ನೇ ದೊಡ್ಡದು ಮಾಡದೆ ಸಹಬಾಳ್ವೆ ನಡೆಸುವ ಮೂಲಕ ಮಾದರಿಯಾಗಬೇಕು ಎಂದು ನವ ದಂಪತಿಗಳಿಗೆ ಕಿವಿಮಾತು ಹೇಳಿದರು.
ಮಾಜಿ ಶಾಸಕ ಯು.ಬಿ. ಬಣಕಾರ ಮಾತನಾಡಿ, ಜೀವನದಲ್ಲಿ ವಿವಾಹ ಪ್ರಮುಖ ಘಟ್ಟ. ದಂಪತಿಗಳು ರಥದ ಎರಡು ಗಾಲಿಗಳಿದ್ದಂತೆ. ಬರುವ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಿ ಬದುಕನ್ನು ಹಸನು ಮಾಡಿಕೊಳ್ಳಲು ಧರ್ಮಮಾರ್ಗ ಅನುಸರಿಸುವಂತೆ ಸಲಹೆ ಮಾಡಿದರು.
ಹುಸೇನಸಾಬ ಶರೀಫ, ಅಣ್ಣಪ್ಪ ದಿಂಡಗೂರ, ಗ್ರಾಪಂ ಅಧ್ಯಕ್ಷ ಕುಬೇರಪ್ಪ ಕರಿಯಣ್ಣನವರ, ಸದಸ್ಯ ರಾಮನಗೌಡ ಪಾಟೀಲ, ರೇಣುಕಾ ತಳವಾರ, ಮರಡೆಮ್ಮ ಕುರುಬರ, ಶಂಭುಲಿಂಗಯ್ಯ ಲಿಂಗದಹಳ್ಳಿ, ಬೀರಜ್ಜ ಪೂಜಾರ, ಶಿವಪ್ಪ ಬಳ್ಳಿಗಾವಿ, ಬೀರಪ್ಪ ಕರದಣ್ಣನವರ, ಫಕ್ಕೀರಪ್ಪ ತಮ್ಮಣ್ಣನವರ, ಸದಾಶಿವ ಯತ್ತಿನಹಳ್ಳಿ ಹಾಜರಿದ್ದರು. 12 ಜೋಡಿ ಸಾಮೂಹಿಕ ವಿವಾಹ ನಡೆದವು.