ಬೆವರಿಳಿಸುತ್ತಿರುವ ಬಂಡಾಯ ಅಭ್ಯರ್ಥಿಗಳು
ಅತೃಪ್ತರನ್ನು ಸಮಾಧಾನಪಡಿಸುವುದೇ ವಿವಿಧ ಪಕ್ಷಗಳ ಮುಖಂಡರಿಗೆ ಸವಾಲು
ಟ ಕಿರಣ ಮಾಸಣಗಿ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 27
ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಅಖಾಡ ಸಿದ್ಧವಾಗಿದೆ. ಆದರೆ, ಬಹುತೇಕ ಎಲ್ಲ ಪಕ್ಷಗಳ ಮುಖಂಡರಿಗೂ ಅತೃಪ್ತರನ್ನು ಸಮಾಧಾನಿಸುವುದೇ ದೊಡ್ಡ ಸವಾಲಾಗಿದೆ. ಈ ಕುರಿತಂತೆ ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಜೆಡಿಎಸ್ ಹೀಗೆ ವಿವಿಧ ಪಕ್ಷಗಳಲ್ಲೂ ಅತೃಪ್ತ ಕಾರ್ಯಕರ್ತರಿದ್ದಾರೆ. ಈ ಕುರಿತಂತೆ ಈ ಹಿಂದೆ ತೆರೆಮರೆಯ ಪ್ರಯತ್ನ ನಡೆಸಿದವರೆಲ್ಲ ಈಗ ನೇರ ಸ್ಪರ್ಧೆಗೆ ತೊಡೆ ತಟ್ಟಿರುವುದು ಎಲ್ಲ ಪಕ್ಷಗಳ ಮುಖಂಡರಲ್ಲಿ ಇರುಸು-ಮುರುಸು ಉಂಟುಮಾಡಿದೆ.
ಮುಖಂಡರಿಗೆ ಧರ್ಮ ಸಂಕಟ: ಕೆಲವರು ಪಕ್ಷೇತರರಾಗಿ ಸ್ಪರ್ಧಿಸಿದರೂ ತಮ್ಮನ್ನು ಕಡೆಗಣನೆ ಮಾಡಿದ ಪಕ್ಷಗಳಿಗೆ ಬುದ್ಧಿ ಕಲಿಸಲು ಹವಣಿಸುತ್ತಿದ್ದಾರೆ. ಮತ್ತೆ ಕೆಲವರು ನೇರವಾಗಿ ಬಂಡಾಯದ ಬಾವುಟ ಹಾರಿಸುವ ಮೂಲಕ ಪಕ್ಷ ಸಂಘಟಿಸಿದ ತಮ್ಮನ್ನೇ ಅವಗಣನೆ ಮಾಡಲಾಗಿದೆ. ಧೈರ್ಯವಿದ್ದಲ್ಲಿ ಪಕ್ಷದಿಂದ ಉಚ್ಚಾಟಿಸಲಿ ಎಂದು ನೇರವಾಗಿಯೇ ಆರೋಪಿಸುವ ಮೂಲಕ ಚಾಲೆಂಜ್ ಮಾಡುತ್ತಿರುವುದು ಮುಂಖಡರಿಗೆ ಧರ್ಮ ಸಂಕಟದ ಸ್ಥಿತಿ ನಿರ್ಮಿಸಿದೆ.
ಅವಕಾಶ ಸದುಪಯೋಗದತ್ತ ಅತೃಪ್ತರು: ನಗರ, ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿಯೇ ಇಂಥ ಅತೃಪ್ತರು ಒಂದುಗೂಡಿದಲ್ಲಿ ಪಕ್ಷಗಳ ಸ್ಥಿತಿ ಏನಾಗಿರಬೇಡ. ಪ್ರಸ್ತುತ ಇಂಥ ಸ್ಥಿತಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಉರುಳಾಗಿ ಪರಿಣಮಿಸಿದೆ. ಇದೇ ಸಂದರ್ಭ ಸದುಪಯೋಗಪಡಿಸಿಕೊಳ್ಳಲು ಹಾಗೂ ಅದನ್ನು ತಮ್ಮ ಪಕ್ಷದ ಓಟನ್ನಾಗಿ ಪರಿವರ್ತಿಸಿಕೊಳ್ಳಲು ಇತರೆ ಪಕ್ಷಗಳು ಚಿಂತನೆ ನಡೆಸುತ್ತಿರುವುದು ಈಗ ಬಹಿರಂಗವಾಗಿದೆ.
ಸಮಾಧಾನಿಸುವುದೇ ಸವಾಲು: ಜಿಲ್ಲೆಯಲ್ಲಿ ಒಟ್ಟು ಎರಡು ನಗರಸಭೆಗಳಿದ್ದು, ಹಾವೇರಿ ಹಾಗೂ ರಾಣಿಬೆನ್ನೂರಿನಲ್ಲಿ ಅದರಲ್ಲೂ ವಿಶೇಷವಾಗಿ ನಗರಸಭಾ ಅಭ್ಯರ್ಥಿ ಸ್ಥಾನಕ್ಕೆ ಸ್ಫರ್ಧಿಸಲು ಪ್ರತಿ ಪಕ್ಷಗಳಿಂದ ಕನಿಷ್ಠ 8 ಸ್ಫರ್ಧಾರ್ಥಿಗಳು ಕ್ಯೂನಲ್ಲಿ ನಿಲ್ಲುವ ಮೂಲಕ ಪಕ್ಷದ ಮುಖಂಡರಿಗೆ ಮೊದಲ ಹಂತದಲ್ಲಿ ಗೊಂದಲ ನಿರ್ಮಾಣ ಮಾಡಿದ್ದರು. ಅದರಲ್ಲಿ ಕೆಲವರನ್ನು ಹಿಂದೆ ಸರಿಸುವಲ್ಲಿ ನಾಯಕರು ಯಶಸ್ವಿಯಾದರೂ ಉಳಿದ ಅಭ್ಯರ್ಥಿಗಳು ಪಟ್ಟು ಹಿಡಿದು ಇಲ್ಲವೇ ಹಠಮಾರಿ ಸ್ವಭಾವದ ಆಕಾಂಕ್ಷಿಗಳನ್ನು ಎದುರಿಸುವುದೇ ಮುಖಂಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.
ಅನಿಶ್ಚಿತತೆ ಕರಿನೆರಳು: ಬಿಜೆಪಿ ಹಾವೇರಿ ಶಹರ ಘಟಕದ ಅಧ್ಯಕ್ಷೆ ಶಶಿಕಲಾ ಮಠದ ಅವರ ಪತಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿರುವುದರಿಂದ ಬೇಸತ್ತು ಮಹಿಳಾ ಘಟಕ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡಿರುವುದು ಗಮನಾರ್ಹ. ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಪ್ರತಿ ವಾರ್ಡಿನಲ್ಲೂ ಕನಿಷ್ಠ 4 ಪಕ್ಷೇತರರು ಸ್ಪರ್ಧೆಗೆ ಇಳಿದಿರುವುದು ಫಲಿತಾಂಶದ ಅನಿಶ್ಚಿತತೆಗೆ ಕಾರಣವಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ನುಡಿ.