ಶಿಕ್ಷಕರು ಭಾವೈಕ್ಯದ ಶಿಕ್ಷಣ ಉಣಬಡಿಸಿ
ಕನ್ನಡಪ್ರಭ ವಾರ್ತೆ, ಸವಣೂರು, ಜ.15
ದೇಶಪ್ರೇಮ, ದೇಶಭಕ್ತಿ ಹಾಗೂ ಭಾವೈಕ್ಯತೆ ಮೂಡಿಸುವಂತಹ ಶಿಕ್ಷಣ ನೀಡುವ ಸೇವಾದಳದ ಶಿಕ್ಷಣ ಇಂದಿನ ಯುವಜನಾಂಗ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಎಂದು ದೈಹಿಕ ಶಿಕ್ಷಣಾಧಿಕಾರಿ ಶಿವಾನಂದ ಬಡಶೆಟ್ಟಿ ಹೇಳಿದರು.
ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 2ರಲ್ಲಿ ಭಾರತ ಸೇವಾದಳ ತಾಲೂಕು ಘಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಜರುಗಿದ ಒಂದು ದಿನದ ಭಾರತ ಸೇವಾದಳ ಪುನಶ್ಚೇತನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೇವಾದಳ ಸಂಸ್ಥೆ ಯುವಕರಲ್ಲಿ ಶಿಸ್ತು, ಅಹಿಂಸೆ, ತ್ಯಾಗ ಮನೋಭಾವನೆ, ಭಾವೈಕ್ಯತೆ ಸೇರಿದಂತೆ ಹಲವಾರು ವಿಷಯಗಳ ತರಬೇತಿ ನೀಡುತ್ತದೆ. ಈ ಶಿಬಿರದ ಸದುಪಯೋಗ ಪಡೆದುಕೊಂಡ ಶಿಕ್ಷಕರು ಮೊದಲು ತಾವು ಕಲಿತು ಇನ್ನೊಬ್ಬರಿಗೆ ಕಲಿಸುವ ಮನೋಭಾವ ಹೊಂದಬೇಕೆಂದರು. ಯಲ್ಲನಗೌಡ್ರ ಬಚ್ಚಪ್ಪಗೌಡ್ರ ಮಾತನಾಡಿ, ದೇಶದಲ್ಲಿ ಭಯೋತ್ಪಾದನೆ, ಲಂಚಗುಳಿತನ ಹೆಚ್ಚಾಗಿ ಸಮಾಜದಲ್ಲಿ ಉತ್ತಮ ಭವಿಷ್ಯಕ್ಕೆ ಚ್ಯುತಿ ಬರದಂತೆ ಯುವಪೀಳಿಗೆಗೆ ಸೇವಾದಳದ ಗಾಂಧಿ ತತ್ವ ಬೆಳೆಸಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಸೇವಾದಳ ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರಯ್ಯ ಹಿರೇಮಠ ವಹಿಸಿದ್ದರು.
ಜಿಲ್ಲಾ ಭಾ.ಸೇ ಬೋಧಕರಾದ ಪ್ರಕಾಶ ಗೋಣಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಪಿ.ಆರ್. ನವಲೆ, ಸಿಆರ್‌ಪಿ ಎಸ್.ವ್ಹಿ. ಇಚ್ಚಂಗಿಮಠ, ಪ್ರಾ.ಶಾ.ಶಿ. ಸಂಘದ ಕಾರ್ಯದರ್ಶಿ ಆರ್.ಎಸ್. ಈಳಗೇರ, ಜಿ.ದೈ.ಶಿ.ಶಿ. ಸಂಘದ ಅಧ್ಯಕ್ಷ ಎಸ್.ವ್ಹಿ. ಕೋಳಿವಾಡ, ತಾ.ದೈ.ಶಿ.ಶಿ. ಸಂಘದ ಅಧ್ಯಕ್ಷ ಎಸ್.ಜಿ. ಕೋರಿ ಉಪಸ್ಥಿತರಿದ್ದರು. ಒಂದು ದಿನದ ತರಬೇತಿ ಶಿಬಿರದಲ್ಲಿ ತಾಲೂಕಿನ 35 ಶಾಲೆಗಳಿಂದ ಶಿಕ್ಷಕರು, ಶಿಕ್ಷಕಿಯರು ಪಾಲ್ಗೊಂಡಿದ್ದರು. ಎನ್.ಎಂ. ಪಾಟೀಲ್ ಸ್ವಾಗತಿಸಿದರು. ಶಂಕರ ಲಮಾಣಿ ನಿರೂಪಿಸಿದರು. ಧೂಳಿಕೊಪ್ಪ ವಂದಿಸಿದರು.