ಸನ್ಮಿತ್ರ ಮಂಡಳಿ 20ನೇ ವರ್ಧಂತಿ: ಶೋಭಾಯಾತ್ರೆ
ಕನ್ನಡಪ್ರಭ ವಾರ್ತೆ, ಸವಣೂರು, ಜ. 15
ನಗರದ ಔದುಂಬರೇಶ್ವರ ಸನ್ನಿಧಿಯಲ್ಲಿ ಜರುಗಿದ ಅಗಡಿ ಆನಂದವನದ ಶೇಷಾಚಲ ಸದ್ಗುರು ವೇದ-ಸಂಸ್ಕೃತ ವಿದ್ಯಾರ್ಥಿಗಳ ಸನ್ಮಿತ್ರ ಮಂಡಳಿಯ 20ನೇ ವಾರ್ಷಿಕೋತ್ಸವ ಭವ್ಯ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು.
ಎರಡು ದಿನಗಳ ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮದ್ ಯಾಜ್ಞ್ಯವಲ್ಕ್ಯ ಸದ್ಗುರುಗಳ ಹಾಗೂ ಶ್ರೀ ಶಂಕರಾಚಾರ್ಯರ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು. ಔದುಂಬರೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭವಾಯಿತು. ಸವಣೂರಿನ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲ ವೃಂದಾವನ ಸನ್ನಿಧಿಗೆ ಆಗಮಿಸಿದಾಗ ಭವ್ಯ ಸ್ವಾಗತ ಕೋರಲಾಯಿತು. ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಮೋಹನಾಚಾರ್ಯ ರಾಯಚೂರ, ಗುರುರಾಜಾಚಾರ್ಯ ರಾಯಚೂರ, ಪ್ರಮುಖರಾದ ಜಿ.ಬಿ. ರಾಯಚೂರ ಶೋಭಾಯಾತ್ರೆಯನ್ನು ಸ್ವಾಗತಿಸಿ, ಪ್ರಮುಖರನ್ನು ಸನ್ಮಾನಿಸಿದರು.
ಬಳಿಕ ಔದುಂಬರೇಶ್ವರ ದೇವಸ್ಥಾನದಲ್ಲಿ ಅಗಡಿ ಆನಂದವನದ ಶೇಷಾಚಲ ಸದ್ಗುರು ವೇದ-ಸಂಸ್ಕೃತ ವಿದ್ಯಾರ್ಥಿಗಳ ಸನ್ಮಿತ್ರ ಮಂಡಳಿಯ 20ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ನೆರವೇರಿತು. ಸಾನ್ನಿಧ್ಯ ವಹಿಸಿದ್ದ ಆನಂದವನದ ಪೀಠಾಧಿಪತಿ ಗುರುದತ್ತ ಚಕ್ರವರ್ತಿಗಳು ಅನುಗ್ರಹ ಸಂದೇಶ ನೀಡಿದರು.
ಮಂಡಳಿಯ ಸದಸ್ಯರ ಸಂಖ್ಯೆ 65ಕ್ಕೇರಿದೆ. ಧಾರ್ಮಿಕ ಗ್ರಂಥಗಳ ಪುನರ್ ಮುದ್ರಣ, ಅಧ್ಯಯನ, ಸಂಗ್ರಹ ಚಟುವಟಿಕೆ ನಡೆಸಲಾಗುತ್ತಿದೆ ಎಂದರು.
ಪ್ರಧಾನ ಗುರು ಸಿ.ಆರ್. ಜೋಶಿ ಮಾತನಾಡಿ, ಪಾಠಶಾಲೆಯಿಂದ ಪ್ರಕಟಗೊಳ್ಳುವ ಗ್ರಂಥಗಳ ಮುದ್ರಣ ವೆಚ್ಚ ಭರಿಸುವದಾಗಿ ತಿಳಿಸಿದರು. ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ತಮ್ಮ ದೋಷಗಳನ್ನು ತಿದ್ದಿಕೊಳ್ಳಬೇಕು. ಜ್ಞಾನಾರ್ಜನೆಯ ಜತೆಗೆ ನ್ಯೂನತೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಜ್ಞಾನದ ಅರಿವಿನೊಂದಿಗೆ ಹೊಸತನದ ಕಡೆಗೆ ಸಾಗಬೇಕು ಎಂದರು.
ಸಂಘಟಕ ವಿನಾಯಕ ಸಾರಥರಾಮ್ ಪ್ರಾಸ್ತಾವಿಕ ಮಾತನಾಡಿ, ಗುರುಸ್ಮರಣೆ ಮಾಡಿದರು. ಪಾಠಶಾಲೆಯ ಮುಖ್ಯಸ್ಥ ವೇದಬ್ರಹ್ಮ ಪಂ. ಶಂಕರಭಟ್ ಜೋಶಿ ನೇತೃತ್ವ ವಹಿಸಿದ್ದರು.
ಸನ್ಮಿತ್ರ ಮಂಡಳಿ ಪದಾಧಿಕಾರಿಗಳಾದ ಬೆಂಗಳೂರಿನ ಪಂ. ಗಿರೀಶ ಶರ್ಮ, ಸೂಡಿಯ ಪಂ. ಭುಜಂಗ ಶರ್ಮ, ಹೊಸಪೇಟೆಯ ಪಂ. ಪಾರ್ಥಸಾರಥಿ, ಸವದತ್ತಿಯ ಪಂ. ಭಾಸ್ಕರ ಭಟ್ ಜೋಶಿ ಪಾಲ್ಗೊಂಡಿದ್ದರು. ಔದುಂಬರೇಶ್ವರ ದೇವಸ್ಥಾನದ ಅರ್ಚಕರಾದ ನಾಗರಾಜ ಸಾರಥರಾಮ್, ಚಿದಂಬರ ಸಾರಥರಾಮ್, ವಿನಾಯಕ ಸಾರಥರಾಮ್ ಕಾರ್ಯಕ್ರಮ ನಿರ್ವಹಿಸಿದರು.