ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೂರಿಗಾಗಿ ನ್ಯಾಯಾಲಯ ಮೆಟ್ಟಿಲೇರಿದ ವಿಧವೆ

Lingaraj Badiger
Updated On : 16 Jan 2013, 12:50 pm

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ.15
13 ವರ್ಷಗಳಿಂದ ಆಶ್ರಯ ಮನೆಗಾಗಿ ಅರ್ಜಿ ಸಲ್ಲಿಸಿ ಸುಸ್ತಾದ ಹಾನಗಲ್ಲ ತಾಲೂಕಿನ ಶಿರಗೋಡ ಗ್ರಾಮದ ಸೂರು ರಹಿತ ವಿಧವೆಯೋರ್ವಳು ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣ ಬೆಳಕಿಗೆ ಬಂದಿದೆ.
ಹಾನಗಲ್ಲ ತಾಲೂಕಿನ ಶಿರಗೋಡ ಗ್ರಾಮದ ಸೂರು ರಹಿತ ವಿಧವೆ ಶಂಕ್ರವ್ವ ಬಸವಂತಪ್ಪ ಗಿಣಿವಾಲದ 2000-2001ರಿಂದ ವಸತಿ ಯೋಜನೆ ಮಂಜೂರಿಗಾಗಿ ಮನವಿ, ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ.
ಹೈಕೋರ್ಟ್ ಮೊರೆ: ಈ ಮಧ್ಯೆ ಹಲವು ಪಕ್ಷದ ಜನಪ್ರತಿನಿಧಿಗಳು ಈ ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ನಡೆಸಿ ಹೋಗಿದ್ದಾರೆ. ಆದರೆ ಯಾರೂ ಕೂಡ ಈ ನಿರಾಶ್ರಿತ ಮಹಿಳೆಯ ಸಮಸ್ಯೆಯನ್ನು ಕಣ್ಣೆತ್ತಿ ನೋಡಿಲ್ಲ ಎಂಬುದೇ ಗಮನಾರ್ಹ.
ಈ ಮಹಿಳೆಗೆ ಖಾಲಿ ನಿವೇಶನವಿದ್ದು, ಬಿಪಿಎಲ್ ಪಡಿತರ ಚೀಟಿ ಇದೆ. ಆಶ್ರಯ ಯೋಜನೆಗೆ ನಿಗದಿಪಡಿಸಿದ ಎಲ್ಲ ಅರ್ಹತೆಗಳೂ ಇವೆ. ಮಹಿಳೆ ಇದಕ್ಕೆ ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರನ್ನು ಸಂಪರ್ಕಿಸಿ ಮನೆ ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದಾಳೆ. 2001, 2005, 2007, 2009, 2012 ಹೀಗೆ ಅರ್ಜಿ ಸಲ್ಲಿಸಿದ ದಾಖಲೆಗಳನ್ನೂ ಇಟ್ಟಿದ್ದಾಳೆ. ಆದರೆ ಇದಾವುದೂ ತನ್ನ ನೆರವಿಗೆ ಬಾರದ ಕಾರಣ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.
ದಾಖಲೆ ರವಾನೆ: ಈ ಮಧ್ಯೆ 2012ರ ಕಳೆದ ಜನವರಿಯಲ್ಲಿ ಶಿರಗೋಡ ಗ್ರಾಪಂ ಅಧಿಕಾರಿಗಳು ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡುವುದಾಗಿ ಹೇಳಿದ್ದರಲ್ಲದೇ ತಾಪಂ ಅನುಮೊದನೆ ಪಡೆದು, ಬೆಂಗಳೂರಿಗೆ ಕಳಿಸಿರುವುದಾಗಿಯೂ ಮಹಿಳೆ ಶಂಕ್ರವ್ವಳಿಗೆ ತಿಳಿಸಿದ್ದರು.
ನಿರ್ಲಕ್ಷ್ಯ: ಆದರೆ, ಆ ಪಟ್ಟಿಯಲ್ಲಿಯೂ ಮಹಿಳೆ ಹೆಸರು ಸೇರ್ಪಡೆಗೊಳ್ಳದಿರುವುದು ವಿಪರ್ಯಾಸ. ಇಂಥ ಅಸಹಾಯಕ, ನಿರ್ಗತಿಕರು ತಮ್ಮ ಸಮಸ್ಯೆಯನ್ನು ಯಾರೆದುರು ಹೇಳಿಕೊಳ್ಳಬೇಕು ಅದಕ್ಕೆ ಯಾರಿಂದ ಪರಿಹಾರ ಕಂಡುಕೊಳ್ಳಬೇಕು ಎಂಬ ಸಮಸ್ಯೆ ಎದುರಿಸುವಂತಾಗಿದೆ. ಇದು ತಾಲೂಕು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಈ ಹಿನ್ನೆಲೆಯಲ್ಲಿ ನೊಂದ ಮಹಿಳೆ ಶಂಕ್ರವ್ವ ದಿಟ್ಟತನದಿಂದ ನ್ಯಾಯಕ್ಕಾಗಿ ಹೋರಾಟ ಕೈಗೊಂಡಿದ್ದಾಳೆ. ನ್ಯಾಯಾಲಯದ ಮೊರೆ ಹೋಗಿದ್ದಾಳೆ.
ಈ ಕುರಿತಂತೆ ಮಹಿಳೆ ಪರ ಹೋರಾಟಕ್ಕೆ ಮುಂದಾಗಿರುವ ಬಿಎಸ್‌ಆರ್ ಕಾಂಗ್ರೆಸ್ ತಾಲೂಕು ಸಂಚಾಲಕ ಎಂ.ಎನ್. ಪರಪ್ಪನವರ ಪತ್ರಿಕಾ ಹೇಳಿಕೆ ನೀಡಿ, ಶಿರಗೋಡ ಗ್ರಾಪಂನಲ್ಲಿ ವಸತಿ ಯೋಜನೆಯಡಿ ಆಯ್ಕೆಯಾದವರಲ್ಲಿ ಶೇ. 70ರಷ್ಟು ಫಲಾನುಭವಿಗಳು ಅನರ್ಹರಿದ್ದಾರೆ. ಮನೆ, ಜಮೀನು ಇದ್ದವರಿಗೆ ಮನೆ ಮಂಜೂರು ಮಾಡಲಾಗಿದೆ. ನಿಜ ಫಲಾನುಭವಿಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ.
ಕೂಡಲೇ ಅಂಥವರನ್ನು ಅನುಮೋದನಾ ಪಟ್ಟಿಯಿಂದ ಕೈಬಿಟ್ಟು ಅನ್ಯಾಯಕ್ಕೊಳಗಾದ ಫಲಾನುಭವಿಗಳಿಗೆ ಮನೆ ನೀಡಬೇಕು. ಅಲ್ಲಿಯವರೆಗೆ ಪ್ರಸಕ್ತ ವರ್ಷ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಬಾರದು. ಆದಾಗ್ಯೂ ಮನೆ ಮಂಜೂರಾತಿ ಪತ್ರ ನೀಡಿದರೆ ಬಿಎಸ್‌ಆರ್ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ನೇರ ಹೊಣೆಗಾರರಾಗಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಪಂ ಇಓಗೆ ಪರಪ್ಪನವರ ಮನವಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement