ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹುಕ್ಕೇರಿಮಠ ಅಭಿವೃದ್ಧಿಗೆ ರು. 2 ಕೋಟಿ

Mainashree
Updated On : 22 Jan 2013, 12:53 pm

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 21
ಪ್ರಸಕ್ತ ಬಜೆಟ್‌ನಲ್ಲಿ ಹಾವೇರಿ ಹುಕ್ಕೇರಿಮಠ ಅಭಿವೃದ್ಧಿಗೆ ರು. 2 ಕೋಟಿ ನೀಡುವ ಮೂಲಕ ಶ್ರೀ ಮಠದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಅವರು ಇಲ್ಲಿನ ಹುಕ್ಕೇರಿಮಠದ ಶಿವಬಸವ ಹಾಗೂ ಶಿವಲಿಂಗ ಶ್ರೀಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳಿಗೆ ಗುರುವಂದನೆ ಸಲ್ಲಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಠದ ಸಾಧನೆ ಅಪೂರ್ವ: ಹುಕ್ಕೇರಿಮಠವು 4 ಶತಮಾನಗಳ ಐತಿಹ್ಯ ಹೊಂದಿದೆ. ಶೂನ್ಯ ಪೀಠಾಧಿಪತಿ ಅಲ್ಲಮಪ್ರಭುವಿನ ಸತ್‌ಸಂಪ್ರದಾಯದ ಈ ಮಠ ಪ್ರಸಕ್ತ ಸಾಲಿನಲ್ಲಿ 4ನೇ ತಲೆಮಾರಿನ ಶ್ರೀಗಳ ಮೂಲಕ ತನ್ನ ಧರ್ಮಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ನಾಡಿನ ಶ್ರೇಷ್ಠ ಹಾಗೂ ಪ್ರತಿಷ್ಠಿತ ಮಠಗಳಲ್ಲಿ ಹುಕ್ಕೇರಿಮಠವೂ ಒಂದು. ಬಸವಾದಿ ಶರಣರ ತತ್ವಾದರ್ಶಗಳ ಅನುಸರಣೆಯಲ್ಲಿ ಮಠದ ಸಾಧನೆ ಅಪೂರ್ವವಾಗಿದೆ. ಗುರುವಂದನೆ ನಮ್ಮ ಸಂಸ್ಕೃತಿಯ ಪ್ರತೀಕ ಎಂದರು.
ಮಾದರಿ ಬಜೆಟ್ ಮಂಡನೆ: ನಾಲ್ಕುವರೆ ವರ್ಷಗಳಿಂದ ರಾಜ್ಯ ಸರ್ಕಾರ ಅತ್ಯುತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಮನ ಧ್ವನಿಯಾಗಿದೆ. ಅಭಿವೃದ್ಧಿ ನಿಟ್ಟಿನಲ್ಲಿ ಹೊಸ ಶಕೆ ಆರಂಭಿಸಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಮಾದರಿ ಆಡಳಿತ ಹಾಗೂ ಬಜೆಟ್ ನೀಡ ಬಯಸುತ್ತೇನೆ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ನೀರಾವರಿ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ಕ್ರಾಂತಿಕಾರಿ ಹೆಜ್ಜೆ ಇರಿಸಿದೆ. ಈ ನಿಟ್ಟಿನಲ್ಲಿ ಅದರ ರೂವಾರಿಗಳಾದ ಸಚಿವ ಬಸವರಾಜ ಬೊಮ್ಮಾಯಿ ಅವರ ದೂರದೃಷ್ಟಿ, ಪ್ರಯತ್ನಗಳು ಶ್ಲಾಘನೀಯ. ರಾಜ್ಯದಲ್ಲಿರುವ ನಿರ್ಲಕ್ಷಿತ ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಬಜೆಟ್ ಮಂಡನೆ ಕಾರ್ಯ ಸಾಗಿದೆ ಎಂದರು.
ಸಚಿವ ಬಸವರಾಜ ಬೊಮ್ಮಾಯಿ, ವಿಪ ಸದಸ್ಯ ಸೋಮಣ್ಣ ಬೇವಿನಮರದ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಂದ್ರ ಕಟಕೋಳ, ಮುಖಂಡ ಪ್ರಭು ಹಿಟ್ನಳ್ಳಿ, ಹುಕ್ಕೇರಿಮಠದ ಸದಾಶಿವ ಶ್ರೀಗಳು, ಮೈಂದರ್ಗಿಯ ಮಹಾಂತ ಶ್ರೀಗಳು, ಮಾದನ ಹಿಪ್ಪರಗಿಯ ಮಹಾಂತ ದೇವರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಉದ್ಯಮಿ ಪಿ.ಡಿ. ಶಿರೂರ ಸ್ವಾಗತಿಸಿದರು. ನಿಲಲೋಚನ ಶೀಲವಂತರ ಪ್ರಾರ್ಥಿಸಿದರು. ಶೆಗುಣಸಿಯ ಮಹಾಂತ ದೇವರು ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement