ಪ್ರಾಧಿಕಾರಕ್ಕೆ ಸಮರ್ಪಕ ಅನುದಾನ ನೀಡಿ: ಧರಣಿ
ಹಿರೇಕೆರೂರು: ತಾಲೂಕಿನ ವರಕವಿ ಹಾಗೂ ನಾಡ ಕವಿ ಖ್ಯಾತಿ ಹೊಂದಿರುವ ಸರ್ವಜ್ಞ ಕವಿಯ ಪ್ರಾಧಿಕಾರ ರಚಿಸಿದ್ದರೂ ಯಾವುದೆ ಕೆಲಸಗಳು ಅರಂಭಗೊಂಡಿಲ್ಲ. ತಕ್ಷಣ ಈ ಬಾರಿಯ ಬಜೆಟ್‌ನಲ್ಲಿ ಹಣ ನೀಡುವ ಮೂಲಕ ಪ್ರಾಧಿಕಾರಕ್ಕೆ ಚಾಲನೆ ನೀಡಬೇಕೆಂದು ಆಗ್ರಹಿಸಿ ಕರ್ನಾಟ ಕರಕ್ಷಣಾ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಕರವೇ ಜಿಲ್ಲಾಧ್ಯಕ್ಷ ಕರಬಸಯ್ಯ ಬಸರಿಹಳ್ಳಿಮಠ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಸರ್ವಜ್ಞ ಪ್ರಾಧಿಕಾರದ ಘೋಷಣೆ ಮಾಡಿದ್ದರು. ಈ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ವಿವಿಧ ಸಂಘಟನೆಗಳು ಮತ್ತು ಸಾಹಿತ್ಯಾಸಕ್ತರು ವಿಜಯೋತ್ಸವ ಆಚರಿಸಿದ್ದರು. ಅಲ್ಲದೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡರಿಗೆ ನಾಗರಿಕ ಸನ್ಮಾನ ನೀಡುವ ಮೂಲಕ ಗೌರವಿಸಲಾಗಿತ್ತು.
ಆದರೆ, ಸರ್ವಜ್ಞ ಕವಿಯ ಪ್ರಾಧಿಕಾರ ಮಾಡುವ ಘೋಷಣೆ ಬರಿ ಘೋಷಣೆಯಾಗಿ ಉಳಿದಿದ್ದು, ಯಾವುದೇ ಕಾರ್ಯ ಆರಂಭಗೊಳ್ಳದಿರುವುದು ಎಲ್ಲರಿಗೂ ನೋವುಂಟು ಮಾಡಿದೆ. ಇದರಿಂದಾಗಿ ಸರ್ಕಾರವೇ ಸರ್ವಜ್ಞ ಕವಿಯ ಬಗ್ಗೆ ಅನಾದರ ತೋರಿಸಿದಂತಾಗಿದೆ. ಕಾರಣ ಇನ್ನಾದರೂ ಮುಂಬರುವ ಬಜೆಟ್‌ನಲ್ಲಿ ಹಣ ಮಂಜೂರು ಮಾಡುವ ಮೂಲಕ ಸರ್ವಜ್ಞ ಪ್ರಾಧಿಕಾರದ ಕಾರ್ಯನಿರ್ವಹಣೆಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮುಂದಾಗಬೇಕು. ಇಲ್ಲದಿದ್ದಲ್ಲಿ ಕರವೇಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರಾಧಿಕಾರ ರಚನೆ ಕುರಿತ ಮನವಿಯನ್ನು ತಹಸೀಲ್ದಾರ್ ಟಿ.ಬಿ. ಹೊಸೂರು ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರವೇ ತಾಲೂಕಾಧ್ಯಕ್ಷ ಗಿರೀಶ ಬಾರ್ಕಿ, ಜಿಲ್ಲಾ ವಕ್ತಾರ ಶಿವಾನಂದ ಪೂಜಾರ, ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ದಿಗ್ಗಿಗೌಡ್ರ, ಉಪಾಧ್ಯಕ್ಷ ರೇವಣಪ್ಪ ಚೌಡಣ್ಣನವರ, ರಟ್ಟಿಹಳ್ಳಿ ಘಟಕದ ಅಧ್ಯಕ್ಷ ಮಂಜುನಾಥ ಮುದಿಯಪ್ಪನವರ, ಕರವೇ ಕಾರ್ಯಕರ್ತರಾದ ಮಲ್ಲನಗೌಡ ಪುಟ್ಟಳ್ಳವರ, ಬಸವರಾಜ ಹುಲ್ಲತ್ತಿ, ಸಂಜೀವ ಹಿತ್ಲಳ್ಳಿ, ನಾಗರಾಜ ಉಜನಿಪುರ, ಈಶಪ್ಪ ಹೊನ್ನಾಳಿ, ಚಿದಾನಂದ ಅರ್ಕಾಚಾರಿ ಮೊದಲಾದವರು ಪಾಲ್ಗೊಂಡಿದ್ದರು.