ಕೆರೆ-ಕಟ್ಟೆಗಳನ್ನು ಕಾಪಾಡಿ: ಬಳ್ಳಾರಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ. 23
ಕೆರೆ-ಕಟ್ಟೆಗಳು ಹಿರಿಯರು ನೀಡಿದ ಅಪೂರ್ವ ಕೊಡುಗೆ. ಅವುಗಳನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್. ಬಳ್ಳಾರಿ ನುಡಿದರು.
ಮಂಗಳವಾರ ಇಲ್ಲಿನ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ, ಮಂಗಳೂರಿನ ಶ್ರೀನಿವಾಸ ಸ್ಕೂಲ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ, ಸಣ್ಣ ನೀರಾವರಿ ಇಲಾಖೆ ಏರ್ಪಡಿಸಿದ್ದ ಹಾನಗಲ್ಲ ತಾಲೂಕಿನ ಸಮಗ್ರ ನೀರಾವರಿ ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಪೂರ್ವಜರು ಕೆರೆ-ಕಟ್ಟೆಗಳನ್ನು ಶಾಸ್ತ್ರೋಕ್ತವಾಗಿ ನಿರ್ಮಿಸಿದ್ದರು. ಅವರ ತಾಂತ್ರಿಕತೆ ಇಂದಿಗೂ ಪ್ರಸ್ತುತ. ನೀರಾವರಿ ಲೆಕ್ಕಾಚಾರ, ನಿರ್ವಹಣೆ ವ್ಯವಸ್ಥಿತವಾಗಿತ್ತು. ಧರ್ಮಾ ನದಿ ಹಾಗೂ 1964ರಲ್ಲಿ # 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಜಲಾಶಯದ ನೀರು ಒಂದು ಬೆಳೆಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಕಚ್ಚಾ ಕಾಲುವೆಯನ್ನು ಕಾಂಕ್ರೀಟ್ ಕಾಲುವೆಯಾಗಿ ನವೀಕರಣ ಮಾಡಲಾಗಿದೆ. ಈ ಕಾಲುವೆಯಡಿ 90 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ತಾಲೂಕಿನಲ್ಲಿ ಹರಿದಿರುವ ಧರ್ಮಾ ಹಾಗೂ ವರದಾ ನದಿಗಳಿಗೆ 18 ಕಡೆಗಳಲ್ಲಿ ಬಾಂದಾರ ನಿರ್ಮಿಸಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕೆ ತೆರಿಗೆ ವ್ಯವಸ್ಥೆಯೂ ಇದೆ. ನಿಶ್ಚಿತ ನೀರಾವರಿಯಲ್ಲದ ಮೂಲಗಳಿಂದಲೂ ಹೆಚ್ಚು ನೀರಾವರಿ ಅಭಿವೃದ್ಧಿಗೊಳಿಸಲಾಗಿದೆ ಎಂದರು.
ಅತಿಥಿಯಾಗಿ ಪಾಲ್ಗೊಂಡ ಅಭಿಯಂತರ ಬಂಡಿವಡ್ಡರ ಮಾತನಾಡಿ, ಪುಸ್ತಕ ಜ್ಞಾನಕ್ಕಿಂತ ಯೋಜನೆಗಳ ಪ್ರತ್ಯಕ್ಷ ಜ್ಞಾನ ಮುಖ್ಯ. ಸಿವಿಲ್ ಎಂಜಿನಿಯರಿಂಗ್ನಿಂದ ಸಮಾಜದ ಸಂಪೂರ್ಣ ಅಭಿವೃದ್ಧಿ ಸಾಧ್ಯವಿದೆ. ಸಿವಿಲ್ ಎಂಜಿನಿಯರಿಂಗ್ ವಿಭಾಗ ಬಹಳ ವಿಸ್ತೃತವಾಗಿದ್ದು, 18ನೇ ಶತಮಾನದಿಂದ ಈಚೆಗೆ ಹೆಚ್ಚು ಪ್ರಾಮುಖ್ಯ ಬರುತ್ತಿದೆ. ಹಿಂದಿನ ಕಾಲದ ಕಟ್ಟಡ, ದೇವಾಲಯಗಳಲ್ಲಿ ಬಳಸಿದ ಗಣಿತಶಾಸ್ತ್ರ ಇಂದಿಗೂ ಅನುಕರಣೀಯ. ಅಂದಿನ ಶಿಲ್ಪಿಗಳಲ್ಲಿ ತಾಂತ್ರಿಕತೆ ಇತ್ತು. ವಿದ್ಯಾರ್ಥಿಗಳು ಯೋಜನೆಗಳ ಅನುಷ್ಠಾನ ಹಾಗೂ ನಿರ್ಮಾಣಗಳಲ್ಲಿ ಗುಣಾತ್ಮಕತೆ ಹಾಗೂ ಕೌಶಲ್ಯ ಅಳವಡಿಸಿಕೊಳ್ಳಬೇಕ. ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು. ತಾಲೂಕಿನಲ್ಲಿ ಸುಮಾರು 780 ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆ 122 ಕೆರೆಗಳಿಂದ ಒಟ್ಟು 13 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಿದೆ ಎಂದರು.
ಮಂಗಳೂರ ಕಾಲೇಜಿನ ಎಂಜಿನಿಯರಿಂಗ್ ವಿಭಾಗದ ರಾಮಕೃಷ್ಣ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಹಸೀನಾಬಿ ನಾಯ್ಕನವರ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್. ಮಠದ, ಬಿ.ಎಸ್. ಅಕ್ಕಿವಳ್ಳಿ ಉಪಸ್ಥಿತರಿದ್ದರು. ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ.ಎನ್. ಭಟ್ ಸ್ವಾಗತಿಸಿದರು. ಪ್ರೊ ಶ್ರೀನಾಥ ರಾವ್ ನಿರೂಪಿಸಿ, ವಂದಿಸಿದರು.