ಜಾನುವಾರು ಆರೋಗ್ಯ ಶಿಬಿರ ಉದ್ಘಾಟನೆ
ಶಿಗ್ಗಾಂವಿ: ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಬರುವುದು ಸಹಜ. ಈ ಬಗ್ಗೆ ನಿಷ್ಕಾಳಜಿ ಮಾಡದೆ, ತಕ್ಷಣ ಪಶು ಆರೋಗ್ಯ ವೈದ್ಯರಲ್ಲಿ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸುವಂತೆ ಗ್ರಾಮ ಪಂಚಾಯತಿ ಸದಸ್ಯ ಶೇಖಣ್ಣ ಗಣಾಚಾರಿ ರೈತರಿಗೆ ಸಲಹೆ ನೀಡಿದ್ದಾರೆ. ತಾಲೂಕಿನ ಹುಲಗೂರ ಗ್ರಾಮದಲ್ಲಿ ಗ್ರಾಪಂ, ಪಶು ಸಂಗೋಪನಾ, ಜಲಾನಯನ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಜಾನುವಾರುಗಳ ಆರೋಗ್ಯ ಶಿಬಿರದ ಅಧ್ಯಕ್ಷತೆ ವಹಿಸಿದ್ದ ಅವರು, ರಾಸುಗಳು ಹೆಚ್ಚು ಹಾಲು ಉತ್ಪಾದಿಸುವಂತೆ ಅವುಗಳಿಗೆ ಹಸಿರು ಮೇವು ಹಾಗೂ ಮಿನರಲ್ ಮಿಕ್ಸ್ ನೀಡಬೇಕು ಎಂದರು. ಗ್ರಾಪಂ ಉಪಾಧ್ಯಕ್ಷೆ ರತ್ನವ್ವ ಸಂಶಿ ಕಾರ್ಯಕ್ರಮ ಉದ್ಘಾಟಿಸಿದರು. ರೈತರಿಗೆ ಮಿನರಲ್ ಮಿಕ್ಸ್ ಪ್ಯಾಕೆಟ್ ವಿತರಿಸಿದರು. ಹಿರಿಯ ಪಶು ವೈದ್ಯ ಪರೀಕ್ಷಕ ಜೆ.ಎಸ್. ಅಗಸರ, ಜಲಾನಯನ ಅಧಿಕಾರಿ ಎಸ್.ವಿ. ಹರ್ತಿ, ಗ್ರಾಪಂ ಸದಸ್ಯ ಮಹ್ಮದ್ ಗೌಸ್ ಕಳ್ಳಿಮನಿ ಇದ್ದರು.