ಜೆಡಿಎಸ್ನತ್ತ ಮತದಾರರ ಒಲವು: ಬನ್ನಿಕೋಡ
ಹಿರೇಕೆರೂರು: ರಾಜ್ಯದಲ್ಲಿ ಜಾತ್ಯತೀತ ಜನತಾ ದಳದ ಪರ ಅಲೆ ಎದ್ದಿದ್ದು, ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಚಾರ, ಸ್ವ-ಜನಪಕ್ಷಪಾತದಿಂದ ಜನ ಬೇಸತ್ತು ಜೆಡಿಎಸ್ ಕಡೆಗೆ ವಾಲುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಾವು ಪ್ರತಿನಿತ್ಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಂಘಟನಾ ಕಾರ್ಯ ಚುರುಕುಗೊಳಿಸಿದ್ದು, ವಿವಿಧ ಪಕ್ಷಗಳ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಬೆಂಬಲಿಸುತ್ತಿದ್ದಾರೆ.
ತಾಲೂಕಿನ ಜನತೆಗೆ ನೀರಾವರಿ ಯೋಜನೆ ಕಲ್ಪಿಸುವ ಮಹತ್ವಾಕಾಂಕ್ಷೆ ಯೋಜನೆಯಾದ ತುಂಗಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ತುಂಗಾ ಮೇಲ್ಡಂಡೆ ಹೋರಾಟ ಸಮಿತಿ ರಚಿಸಿ ಅದರ ಕೇಂದ್ರ ಸಮಿತಿ ಅಧ್ಯಕ್ಷನಾಗಿ ಅನೇಕ ಹೋರಾಟಗಳನ್ನು ಮಾಡಿದ ಫಲವಾಗಿ ಇಂದು ರೈತರ ಜಮೀನುಗಳಿಗೆ ನೀರು ಹರಿಯುತ್ತಿದೆ. ಬರಗಾಲದಲ್ಲೂ ರೈತರಿಗೆ ವರದಾನವಾಗಿದ್ದು, ತಾಲೂಕಿನ ವಿವಿಧ ಗ್ರಾಮಗಳ ರೈತರಿಗೆ ಅನುಕೂಲವಾಗಿದೆ ಎಂದರು.
ಎರಡು ಬಾರಿ ಶಾಸಕನಾದಾಗಲೂ ಜೆಡಿಎಸ್ ಪಕ್ಷ ಅಧಿಕಾರದಲ್ಲಿರಲಿಲ್ಲ. ಆದರೂ ನಮ್ಮ ಶಕ್ತಿ ಮೀರಿ ತಾಲೂಕಿಗೆ ಅನುದಾನ ತಂದು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಕಾರ್ಯ ಮಾಡಿದ್ದೇನೆ ಎಂದರು.
ಈ ಸಂದರ್ಭ ತಾಲೂಕು ಜೆಡಿಎಸ್ ಅಧ್ಯಕ್ಷ ಸುರೇಶಗೌಡ ಸೊರಟೂರ, ನ್ಯಾಯವಾದಿಗಳಾದ ಎಚ್.ಎಸ್. ಕೋಣನವರ, ಜಿ.ವಿ. ಕುಲಕರ್ಣಿ, ಐ.ಬಿ. ಗುಬ್ಬಿ, ಸುಭಾಷಗೌಡ ಪಾಟೀಲ, ಅಲ್ಲಾಭಕ್ಷಸಾಬ ಕನವಳ್ಳಿ, ಎ.ಎ. ಕಚವಿ, ರಾಜಶೇಖರ ಹಂಪಾಳಿ, ತೋಟೇಶಪ್ಪ ಹಳಕಟ್ಟಿ, ಎಸ್.ವಿ. ಪಾಟೀಲ, ಮೊದಲಾದವರು ಹಾಜರಿದ್ದರು.