ಬಸ್ ಸೌಲಭ್ಯಕ್ಕಾಗಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ.23
ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಟ್ಟಣದ ಮಹಾಶಯ ಧರ್ಮಪಾಲ ಶಾಲೆ ಬಳಿ ಸಾರಿಗೆ ಬಸ್‌ನ್ನು 2 ತಾಸಿಗೂ ಹೆಚ್ಚು ಕಾಲ ತಡೆದು ಹಠಾತ್ ಪ್ರತಿಭಟನೆ ನಡೆಸಿದರು.
ಸ್ಥಳೀಯ ಸಾರಿಗೆ ಘಟಕವು ಶಾಲಾ ವೇಳೆಗೆ ತಾಲೂಕಿನ ಕೊಲ್ಲಾಪುರ ಆಣೂರು ಬಿಸಲಹಳ್ಳಿ ಹಾಗೂ ಬನ್ನಿಹಟ್ಟಿ ಮಾರ್ಗವಾಗಿ ಪಟ್ಟಣಕ್ಕೆ ಹೆಚ್ಚುವರಿ ಬಸ್ ಕಾರ್ಯವೈಖರಿ ಕಲ್ಪಿಸದಿರುವುದೇ ಪ್ರತಿಭಟನೆಗೆ ಕಾರಣ. ಪ್ರತಿಭಟನಾನಿರತ ವಿದ್ಯಾರ್ಥಿಗಳು ಸಾರಿಗೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಬಸ್ಸಲ್ಲಿ 200 ವಿದ್ಯಾರ್ಥಿಗಳು: ರೈತ ಮುಖಂಡ ಕೆ.ವಿ. ದೊಡ್ಡಗೌಡ್ರ ಮಾತನಾಡಿ, 4 ಗ್ರಾಮಗಳ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ, ಈ ಮಾರ್ಗದಲ್ಲಿ ಒಂದೇ ಬಸ್ ಸಂಚರಿಸುತ್ತಿದ್ದು, 2 ಬಸ್‌ಗಾಗುವಷ್ಟು ವಿದ್ಯಾರ್ಥಿಗಳು 1ರಲ್ಲೇ ಪ್ರಯಾಣಿಸುವುದು ಅನಿವಾರ್ಯವಾಗಿದ್ದು, ಇನ್ನೂ ಖಾಸಗಿ ಪ್ರಯಾಣಿಕರ ಗತಿ ಏನು.. ಎಂದು ಪ್ರಶ್ನಿಸಿದರು.
ಇಲಾಖೆಗೆ ಮಾಹಿತಿ ಇದೆ: ನಾಲ್ಕು ಗ್ರಾಮಗಳಿಂದ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ ಪಾಸ್ ಪಡೆದು ಸಂಚರಿಸುತ್ತಿರುವ ಮಾಹಿತಿ ಇಲಾಖೆ ಗಮನದಲ್ಲಿದ್ದರೂ ಹೆಚ್ಚುವರಿ ಬಸ್ ಬಿಡುತ್ತಿಲ್ಲ. ಹೀಗಾಗಿ ಬಸ್ ಒಳಭಾಗದಲ್ಲಿ ಕಾಲಿಡದಷ್ಟು ಪ್ರಯಾಣಿಕರು ಸಂಚರಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು ತೀವ್ರ ತೊಂದರೆಗಿಡಾಗಿದ್ದಾರೆ ಎಂದು ಆರೋಪಿಸಿದರು.
ಮನವಿಗೆ ಕ್ಯಾರೇ ಎನ್ನುತ್ತಿಲ್ಲ: ಶಾಲಾ ಸಮಯಕ್ಕೆ ಹೆಚ್ಚುವರಿ ಬಸ್‌ಗೆ ಆಗ್ರಹಿಸಿ 3 ಬಾರಿ ಪ್ರತಿಭಟನೆ ನಡೆದಿವೆಯಲ್ಲದೇ ಪಾಲಕರು ಖುದ್ದಾಗಿ ಸಾರಿಗೆ ಘಟಕಕ್ಕೆ ತೆರಳಿ ಮನವಿ ಸಲ್ಲಿಸಿದರೂ ಸಾರಿಗೆ ಇಲಾಖೆಯವರು ಕ್ಯಾರೇ ಎನ್ನುತ್ತಿಲ್ಲ. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ನಿತ್ಯ 9ಕ್ಕೆ ಬ್ಯಾಡಗಿ ತಲುಪಬೇಕಾದ ಬಸ್ 11ಕ್ಕೆ ತಲುಪುತ್ತಿದೆ. ಇದರಿಂದ ಮಕ್ಕಳು ನಿತ್ಯ ಶಾಲೆಗೆ ತಡವಾಗಿ ಹಾಜರಾಗುತ್ತಿದ್ದು, ಶೈಕ್ಷಣಿಕ ಪ್ರಗತಿಗೆ ಹಿನ್ನೆಡೆಯಾಗುತ್ತಿದೆ ಎಂದರು.
ಸುದ್ದಿ ತಿಳಿದು ಘಟನಾ ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಘಟಕ ವ್ಯವಸ್ಥಾಪಕ ಆನಂದ ಗುಂಜಳ ನಾಳೆಯಿಂದಲೇ ಹೆಚ್ಚುವರಿ ಬಸ್ ಸಂಚಾರ ಆರಂಭಿಸುವ ಭರವಸೆಯೊಂದಿಗೆ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡಿದರು.
ಮಂಜುನಾಥ ಪೂಜಾರ, ಡಾ. ಪ್ರಕಾಶ ಭಸ್ಮೆ, ಹರೀಶ ಹೊಸಗೌಡ್ರ, ಬಸವರಾಜ ಪುಗಟಿ, ಸಂತೋಷ ರುದ್ರಳ್ಳಿ, ಮಂಜು ಬಣಕಾರ, ಆನಂದ, ರಾಮು ಬಳ್ಳಾರಿ, ಸಿದ್ದಪ್ಪ ಬುಡಪನಹಳ್ಳಿ, ನವೀನ ಮುಚ್ಚಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.