ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರಾಜಿನಾಮೆ: ಕಮಲ ಪಾಳಯದಲ್ಲಿ ಕಂಪನ

Mainashree
Updated On : 24 Jan 2013, 10:45 am

ಕನ್ನಡಪ್ರಭ ವಾರ್ತೆ, ಹಾವೇರಿ, ಜ.23
ರಾಜ್ಯ ರಾಜಕಾರಣದಲ್ಲಿ ಕೆಜೆಪಿ ಸ್ಥಾಪನೆಯೊಂದಿಗೆ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದ ಹಾವೇರಿ
ಜಿಲ್ಲೆಯಲ್ಲಿ ಕಮಲದಲ್ಲಿ ತಳಮಳ ಶುರುವಾಗಿದೆ. ಕೆಜೆಪಿ ಸ್ಥಾಪನೆಯೊಂದಿಗೆ ಜಿಲ್ಲೆಯ ಬಿಜೆಪಿ ಶಾಸಕರು ಕೆಜೆಪಿಯತ್ತ ಮುಖ ಮಾಡಲಿದ್ದಾರೆಂದು ಹೇಳಲಾಗಿತ್ತು. ತತ್ಪರಿಣಾಮ ಕೆಜೆಪಿ ವಲಸೆ ಶುರುವಾಗಿದೆ.
ಹಾನಗಲ್ಲ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿ ರಾಜ್ಯದ ಪ್ರಭಾವಿ ಸ್ಥಾನ ಗಿಟ್ಟಿಸಿದ್ದ ಸಚಿವ ಸಿ.ಎಂ.ಉದಾಸಿ ಅವರು ಬೆಂಗಳೂರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅವರು ಕೆಜೆಪಿಯತ್ತ ಮುಖ ಮಾಡುವುದು ಖಚಿತವಾಗಿದೆ. ಉದಾಸಿ ರಾಜಿನಾಮೆಯಿಂದ ಜಿಲ್ಲೆಯಲ್ಲಿ ರಾಜಕೀಯ ಸಂಚಲನ ಮೂಡಿದ್ದು, ಕಮಲ ಪಾಳಯಲ್ಲಿ ಕಂಪನ ಮೂಡಿಸಿದೆ.
ಕುಸಿಯಿತು ಬಿಜೆಪಿ ಕೋಟೆ: ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳ ಪೈಕಿ 5 ರಲ್ಲಿ ಬಿಜೆಪಿ ಜಯ ಗಳಿಸಿತ್ತು. ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರಮೊಂದನ್ನು ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಗಳೂ ಬಿಜೆಪಿ ಪಾಲಾಗಿದ್ದವು. ಈ 5 ಕ್ಷೇತ್ರಗಳಲ್ಲಿ ಈಗ 4 ವಿಧಾನಸಭಾ ಸದಸ್ಯರು ರಾಜಿನಾಮೆ ನೀಡಿ ಕೆಜೆಪಿಯತ್ತ ಮುಖ ಮಾಡಿರುವುದರಿಂದ ಜಿಲ್ಲೆ ಕೆಜೆಪಿಯ ಭದ್ರಕೋಟೆಯಾಗುವತ್ತ ದಾಪಗಾಲು ಇಟ್ಟಂತಾಗಿದೆ. ಮೊದಲಿನಿಂದಲೂ ಬಿಎಸ್‌ವೈ ಅವರೊಂದಿಗೆ ಗುರುತಿಸಿಕೊಂಡಿದ್ದ ಉದಾಸಿ ಇದೀಗ ರಾಜಿನಾಮೆ ನೀಡುವ ಮೂಲಕ ಕೆಜೆಪಿಯತ್ತ ಮುಖ ಮಾಡಿರುವುದು ಸ್ಪಷ್ಟವಾಗಿದೆ. ಆದರೆ ಸಚಿವ ಬೊಮ್ಮಾಯಿ ನಡೆ ಮಾತ್ರ ಇಂದಿಗೂ ಸ್ಪಷ್ಟವಾಗಿಲ್ಲ. ಈಗಾಗಲೇ ಹಾವೇರಿ ಶಾಸಕ ನೆಹರು ಓಲೇಕಾರ, ಬ್ಯಾಡಗಿ ಶಾಸಕ ಸುರೇಶಗೌಡ ಪಾಟೀಲ, ರಾಣಿಬೆನ್ನೂರಿನ ಶಾಸಕ ಜಿ.ಶಿವಣ್ಣ ಬುಧವಾರ ಬಿಎಸ್‌ವೈ ನೇತೃತ್ವದಲ್ಲಿ ಸಚಿವ ಉದಾಸಿ ಅವರೊಂದಿಗೆ ರಾಜಿನಾಮೆಗೆ ತೆರಳಿದ್ದು ಬಹುತೇಕ ಆಯಾ ತಾಲೂಕುಗಳಲ್ಲಿ ಇದು ನಿರೀಕ್ಷಿತವೇ ಆಗಿದೆ.
ಬಿಜೆಪಿಗೆ ಕಷ್ಟ ಕಷ್ಟ: ಉದಾಸಿ ರಾಜಿನಾಮೆ ನೀಡಿರುವುದು ಜಿಲ್ಲಾ ಬಿಜೆಪಿಗೆ ಬಲವಾದ ಪೆಟ್ಟು ಬಿದ್ದಂತಾಗಿದೆ. ಸಿ. ಎಂ. ಉದಾಸಿಯವರ ನೇತೃತ್ವದಿಂದಾಗಿ ಜಿಲ್ಲಾ ಬಿಜೆಪಿಗೆ ಆನೆ ಬಲವಿತ್ತು. ಸಾಲದ್ದಕ್ಕೆ ತಮ್ಮ ಬೆಂಬಲಿಗ ಶಾಸಕರನ್ನು ಗೆಲ್ಲಿಸುವ ಕ್ಷಮತೆಯೂ ಉದಾಸಿಯವರಲ್ಲಿತ್ತು. ಪ್ರಮುಖವಾಗಿ ಅಭಿವೃದ್ಧಿ ಕಾರ್ಯಗಳ ಮೂಲಕ ಜನತೆಗೆ ಸಮೀಪರಾಗಿರುವ ಉದಾಸಿ ಯಾವ ಪಕ್ಷದಲ್ಲಿದ್ದರೂ ಜನತೆ ಅವರನ್ನು ಬೆಂಬಲಿಸಲಿದ್ದಾರೆ. ಉದಾಸಿಯವರಿಲ್ಲ ಬಿಜೆಪಿ ಊಹಿಸಿಕೊಳ್ಳುವುದು ಕಷ್ಟ ಎನ್ನುತ್ತಾರೆ ಜನತೆ.
ನೆಲೆ ಕಳೆದುಕೊಂಡ ಬಿಜೆಪಿ: ಜಿಲ್ಲೆಯ ರಾಜಕಾರಣದ ಕಿಂಗ್‌ಪಿನ್ ಆಗಿದ್ದ ಉದಾಸಿ ಅವರ ರಾಜಿನಾಮೆಯಿಂದ ಜಿಲ್ಲೆಯಲ್ಲಿ ಬಿಜೆಪಿ ನೆಲೆ ಕಳೆದುಕೊಂಡಂತಾಗಿದೆ. ಜಿಲ್ಲೆಯ ರಾಜಕಾರಣದಲ್ಲಿ ಸಿ.ಎಂ.ಉದಾಸಿ ಪ್ರಶ್ನಾತೀತ ನಾಯಕ. ಇವರೊಂದಿಗೆ ನೆಹರು ಓಲೇಕಾರ, ಸುರೇಶಗೌಡ ಪಾಟೀಲ ಹಾಗೂ ಶಿವಣ್ಣ ತಿಳವಳ್ಳಿ ರಾಜಿನಾಮೆ ನೀಡಿರುವುದರಿಂದ ಇದೀಗ ಬಿಜೆಪಿಯನ್ನು ಮತ್ತೆ ಆರಂಭದಿಂದಲೇ ಕಟ್ಟಬೇಕಾದ ಅನಿರ್ವಾತೆ ಎದುರಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement