ವೈದ್ಯಕೀಯ ಡಿಪ್ಲೊಮಾದಿಂದ ಉತ್ತಮ ಸೇವೆ
ಕನ್ನಡಪ್ರಭ ವಾರ್ತೆ, ಸವಣೂರು, ಜ.23
ವೈದ್ಯಕೀಯ ಶಿಕ್ಷಣದ ಡಿಪ್ಲೊಮಾ ವಿಭಾಗ ಆರಂಭಿಸಿದಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಸಾಧ್ಯವಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸವಣೂರಿನ ಸಹರಾ ನರ್ಸಿಂಗ್ ಹೋಂನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರೋಗ ಪತ್ತೆ, ಚಿಕಿತ್ಸೆ ಸುಲಭ: ಚೀನಾ ದೇಶದ ಮಾದರಿಯಲ್ಲಿ ವೈದ್ಯಕೀಯ ಶಿಕ್ಷಣದ ಡಿಪ್ಲೊಮಾ ಆರಂಭಿಸುವ ಅಗತ್ಯವಿದೆ. ಇದರಿಂದ ಪ್ರಾಥಮಿಕ ಹಂತದಲ್ಲೇ ರೋಗ ಪತ್ತೆ ಹಾಗೂ ಚಿಕಿತ್ಸೆ ಸುಲಭವಾಗುತ್ತದೆ. ಕೊರತೆ ಇರುವ ವೈದ್ಯಕೀಯ ಸಿಬ್ಬಂದಿಗಳ ಸಮಸ್ಯೆಗೂ ಪರಿಹಾರ ಸಾಧ್ಯವಾಗುತ್ತದೆ. ಇದರಿಂದ ಪ್ರತಿ ಮನೆ ಮನೆಗೆ ನಿಯಮಿತವಾಗಿ ಭೇಟಿ ನೀಡಿ ಆರೋಗ್ಯ ಸೇವೆ ಸಲ್ಲಿಸಲು ಸಾಧ್ಯವಿದೆ.
ಯೋಜನೆ ತಲುಪಬೇಕಿದೆ: ಜನರ ಆರೋಗ್ಯ ಸಂರಕ್ಷಣೆಯಲ್ಲಿ ಆಯುಷ್ಯ ವೈದ್ಯರ ಕೊಡುಗೆ ಅಮೂಲ್ಯವಾಗಿದೆ. ಜನರಲ್ಲಿ ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ವಿಶ್ವಾಸ ಹೆಚ್ಚುತ್ತಿದೆ. ಜನರ ಆರೋಗ್ಯ ಸಂರಕ್ಷಣೆ ಕಾರ್ಯದಲ್ಲಿ ಸರ್ಕಾರದೊಂದಿಗೆ ಖಾಸಗಿ ವೈದ್ಯರು, ಸಂಘ-ಸಂಸ್ಥೆಗಳು ಹಾಗೂ ಖಾಸಗಿ ಆಸ್ಪತ್ರೆಗಳೂ ತಮ್ಮ ಕೊಡುಗೆ ನೀಡಬೇಕಿದೆ. ವಾಜಪೇಯಿ ಆರೋಗ್ಯ ಶ್ರೀ ಸೇರಿದಂತೆ ಸರ್ಕಾರದ ಹಲವಾರು ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕಿದೆ ಎಂದರು.
ಸಾಮಾಜಿಕ ಪ್ರಜ್ಞೆ ಬೆಳೆಸಿ: ಆರೋಗ್ಯದ ಮುಂದೆ ಉಳಿದೆಲ್ಲ ಸಂಪತ್ತು ನಿಷ್ಪಲ. ಪ್ರತಿಯೊಬ್ಬ ತಾಯಿ-ಮಗುವಿನ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ, ಚಿಕಿತ್ಸೆಯೊಂದಿಗೆ ಪ್ರೀತಿ, ವಿಶ್ವಾಸ, ಭರವಸೆಗಳನ್ನು ರೋಗಿಗಳಲ್ಲಿ ಮೂಡಿಸಬೇಕು. ಆರೋಗ್ಯದೊಂದಿಗೆ ಉಳಿದೆಲ್ಲ ಸಮಸ್ಯೆಗಳನ್ನು ಎದುರಿಸುವ ಆಂತರಿಕ ಶಕ್ತಿಯನ್ನು ಸಾರ್ವಜನಿಕರಲ್ಲಿ ಮೂಡಿಸಿ ಆರೋಗ್ಯ ರಕ್ಷಣೆಯ ದೊಡ್ಡ ಸವಾಲನ್ನು ಎದುರಿಸಲು ಸಾಮಾಜಿಕ ಪ್ರಜ್ಞೆ ಬೆಳೆಸಿ ಎಂದು ಕೋರಿದರು.
ಸಹಾರಾ ಆಸ್ಪತ್ರೆಯ ಉನ್ನತಿಕರಿಸಲಾದ ಶಸ್ತಚಿಕಿತ್ಸಾ ಕೊಠಡಿ ಹಾಗೂ ಔಷಧಾಲಯವನ್ನು ಸಚಿವರು ಉದ್ಘಾಟಿಸಿದರು. ಪ್ರತಿ ಗುರುವಾರ ಆಸ್ಪತ್ರೆಯಲ್ಲಿ ನಿರ್ವಹಿಸಲಾಗುವ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.
ಡಾ. ಕೇದಾರಿ ಮಾಳಿ ಪ್ರಾಸ್ತಾವಿಕ ಮಾತನಾಡಿದರು. ಎನ್.ಕೆ. ಬನ್ನೂರ ಅಧ್ಯಕ್ಷತೆ ವಹಿಸಿದ್ದರು. ಡಾ. ಮುರಳಿಧರ ದೊಡ್ಮನಿ, ಡಾ. ಆನಂದ ಕುಲಕರ್ಣಿ, ಡಾ. ಸುದರ್ಶನ ಬಸ್ತಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ, ಆಡಳಿತ ವರ್ಗ ಹಾಗೂ ಸಾರ್ವಜನಿಕರು ಪಾಲ್ಗೊಂಡ್ದಿದರು.