ಸರ್ಕಾರಿ ಹಾಸ್ಟೆಲ್ಗೆ ಮೂಲಸೌಕರ್ಯ ಕಲ್ಪಿಸಿ
ಬ್ಯಾಡಗಿ: ಆಹಾರ ಭತ್ಯೆ ಹೆಚ್ಚಳ ಸೇರಿದಂತೆ ಸರ್ಕಾರಿ ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ನಿಲಯದ ವಿದ್ಯಾರ್ಥಿಗಳು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹೆಸ್ಕಾಂ ಕಚೇರಿಯಿಂದ ತಾಲೂಕು ಪಂಚಾಯತಿವರೆಗೆ ಮೆರವಣಿಗೆ ಮೂಲಕ ಸಾಗಿದ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆಹಾರ ಭತ್ಯೆ ಹೆಚ್ಚಿಸಿ: ಎಸ್ಎಫ್ಐ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಪೂಜಾರ ಮಾತನಾಡಿ, ಸರ್ಕಾರ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ಕೇವಲ # 720(ದಿನಕ್ಕೆ # 24) ಆಹಾರ ಭತ್ಯೆ ನಿಗದಿಪಡಿಸಿದೆ. ನಿತ್ಯ ಬೆಲೆ ಏರಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಪೂರೈಸಲು ಸಾಧ್ಯವಿಲ್ಲ. ಕೂಡಲೇ ಆಹಾರ ಭತ್ಯೆಯನ್ನು # 1,600ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದರು.
ಸ್ವಂತ ಕಟ್ಟಡ ಕೊಡಿ: ಕಿತ್ತೂರರಾಣಿ ಚನ್ನಮ್ಮ ಸೇರಿದಂತೆ 3 ವಿದ್ಯಾರ್ಥಿ ನಿಲಯಗಳು ಇಂದಿಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ನಿಲಯದ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಅಗತ್ಯ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆಯಾಗಿ ವಸತಿ ನಿಲಯ ತೊರೆಯುತ್ತಿದ್ದಾರೆ. ಶೀಘ್ರ ಎಲ್ಲ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಒದಗಿಸುವಂತೆ ಆಗ್ರಹಿಸಿದರು.
ಕ್ರೀಡಾ ಸಾಮಗ್ರಿ ಮಾಯ: ರಮೇಶ್ ಕಮತರ ಮಾತನಾಡಿ, ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ನೀಡಬೇಕೆಂಬ ನಿಯಮವಿದೆ. ಆದರೆ, ಯಾವುದೇ ಕ್ರೀಡಾ ಸಾಮಗ್ರಿ ಒದಗಿಸಿದ ಉದಾಹರಣೆಯಿಲ್ಲ. ಮೇಲ್ವಿಚಾರಕರು ನಿಯಮವನ್ನು ಗಾಳಿಗೆ ತೂರುವ ಮೂಲಕ ವಿದ್ಯಾರ್ಥಿಗಳಿಗೆ ಮೋಸವೆಸಗಿದ್ದಾರೆ. ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.
ಭರವಸೆ: ಸ್ಥಳಕ್ಕಾಗಮಿಸಿದ ಇಓ ಕೃಷ್ಣಮೂರ್ತಿ, ಸಮಾಜ ಕಲ್ಯಾಣಾಧಿಕಾರಿ ಅಣ್ಣಪ್ಪ ಹಾಗೂ ಹಿಂದುಳಿದ ವರ್ಗಗಳ ಅಧಿಕಾರಿ ಕಲಕೋಟಿ, ಸಮಗ್ರ ತನಿಖೆ ನಡೆಸಿ ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದೆ ಸರಿದರು. ಎಲ್.ಎಮ್. ಲಿಂಗರಾಜ, ಉಮೇಶ್ ಲಮಾಣಿ, ವಸಂತ ಬ್ಯಾಡಪ್ಪನವರ, ಮಂಜುನಾಥ ಪಾಟೀಲ, ಉಮೇಶ ಮಾಲಗತ್ತಿ, ಆನಂದ ಲಮಾಣಿ, ಪ್ರಕಾಶ ಲಮಾಣಿ, ಹೊನ್ನಪ್ಪ ಮಾಳಗಿ, ರಾಘವೇಂದ್ರ ಬೋವಿ, ಗುಡ್ಡಪ್ಪ ಹೆಗಡೆ, ಕೆ. ಆಂಜನೇಯ, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.