30ರಿಂದ ಹೊಸರಿತ್ತಿಯಲ್ಲಿ ಕಸಾಪ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಹಾವೇರಿ, ಜ.24
ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ. 30 ಹಾಗೂ 31ರಂದು ತಾಲೂಕಿನ ಹೊಸರಿತ್ತಿಯಲ್ಲಿ ನಡೆಯಲಿದೆ. ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ನುಡಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಜ. 30ರಂದು ಬೆಳಗ್ಗೆ ವಿವಿಧ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲ ಅವರ ಮೆರವಣಿಗೆ ನಡೆಯಲಿದೆ.
ಸಮ್ಮೇಳನಕ್ಕೆ ಚಾಲನೆ, ಸಂಚಿಕೆ ಬಿಡುಗಡೆ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಸಮ್ಮೇಳನ ಉದ್ಘಾಟಿಸುವರು. ಸಚಿವ ಬಸವರಾಜ ಬೊಮ್ಮಾಯಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಹೊಸ ಪುಸ್ತಕಗಳನ್ನು ಸಂಸದ ಶಿವಕುಮಾರ ಉದಾಸಿ ಬಿಡುಗಡೆ ಮಾಡುವರು. ಪುಸ್ತಕ ಮಳಿಗೆಗೆ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಸಾಂಸ್ಕೃತಿಕ ಚಟುವಟಿಕೆಗೆ ವಿಪ ಸದಸ್ಯ ಸೋಮಣ್ಣ ಬೇವಿನಮರದ ಚಾಲನೆ ನೀಡುವರು ಎಂದರು.
ವಿವಿಧ ಗೋಷ್ಠಿ: ಮಧ್ಯಾಹ್ನ ನಡೆಯುವ ಮಹಿಳಾಗೋಷ್ಠಿಗೆ ಪರಿಸರ ತಜ್ಞೆ ಮಾಧುರಿ ದೇವಧರ ಚಾಲನೆ ನೀಡುವರು. ಚಿಂತಕಿ ಬೆಂಗಳೂರಿನ ಕೆ.ಎಸ್. ವಿಮಲಾ ಅಧ್ಯಕ್ಷತೆ ವಹಿಸುವರು. ಸಾಹಿತಿ ವಾಸಂತಿ ನಾಯಕ, ನ್ಯಾ. ವನಿತಾ ಗುತ್ತಲ, ಉಪನ್ಯಾಸಕಿ ಪುಷ್ಪಾ ಶಲವಡಿಮಠ ವಿಷಯ ಮಂಡಿಸುವರು. ಚಂಪಾ ಸಾಹಿತ್ಯ ಗೋಷ್ಠಿಗೆ ಸಾಹಿತಿ ಸತೀಶ ಕುಲಕರ್ಣಿ ಚಾಲನೆ ನೀಡುವರು. ಕೊಪ್ಪಳದ ಅಲ್ಲಮಪ್ರಭು ಬೆಟದೂರ ಅಧ್ಯಕ್ಷತೆ ವಹಿಸುವರು. ಸಂಜೆ 5.30ಕ್ಕೆ ನಡೆಯುವ ಕವಿಗೋಷ್ಠಿಯನ್ನು ಕವಿ ಗಂಗಾಧರ ನಂದಿ ಉದ್ಘಾಟಿಸುವರು. ಸಾಹಿತಿ ಬಿ. ಶ್ರೀನಿವಾಸ ಅಧ್ಯಕ್ಷತೆ ವಹಿಸುವರು.
31ರಂದು ಜಿಲ್ಲಾದರ್ಶನ ಗೋಷ್ಠಿ: ಜ. 31ರಂದು ಜಿಲ್ಲಾದರ್ಶನ ಗೋಷ್ಠಿಗೆ ನಿವೃತ್ತ ಪ್ರಾಧ್ಯಾಪಕ ಆರ್.ಕೆ. ಬೆಳ್ಳಿಗಟ್ಟಿ ಚಾಲನೆ ನೀಡುವರು. ಪ್ರೊ. ಶ್ರೀಶೈಲ ಹುದ್ದಾರ ಅಧ್ಯಕ್ಷತೆ ವಹಿಸುವರು. ಸಂಕಿರಣ ಗೋಷ್ಠಿಗೆ ಸಂಶೋಧಕ ಡಾ. ಭೋಜರಾಜ ಪಾಟೀಲ ಚಾಲನೆ ನೀಡುವರು. ಪತ್ರಕರ್ತ ಡಾ. ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಪ್ರೊ. ಡಾ. ರಾಮರೆಡ್ಡಿ ರಡ್ಡೇರ, ಡಾ. ಎಚ್.ಡಿ. ಪ್ರಶಾಂತ, ಡಾ. ಎಚ್.ಬಿ. ಬಬಲಾದ ಹಾಗೂ ಪತ್ರಕರ್ತ ವಿಜಯ ಹೂಗಾರ ಉಪನ್ಯಾಸ ನೀಡುವರು ಎಂದರು.
ಸಂವಾದ ಗೋಷ್ಠಿ: ಕನ್ನಡ ಜಗತ್ತು- ಮುಂದಿರುವ ಸವಾಲುಗಳು ಕುರಿತ ಸಂವಾದ ಗೋಷ್ಠಿಗೆ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ನಲ್ಲೂರ ಪ್ರಸಾದ ಚಾಲನೆ ನೀಡುವರು. ವಿಮರ್ಶಕ ಪ್ರಾ. ಚಂದ್ರಶೇಖರ ನಂಗಲಿ ಅಧ್ಯಕ್ಷತೆ ವಹಿಸುವರು. ರಾಜ್ಯದ ಎಲ್ಲ ಜಿಲ್ಲೆಗಳ ಕಸಾಪ ಅಧ್ಯಕ್ಷರು ಪಾಲ್ಗೊಳ್ಳಲಿದ್ದು, ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಸಲು ಅವಕಾಶ ಮಾಡಿಕೊಡುವ ಕುರಿತು ಎಲ್ಲ ಕಸಾಪ ಜಿಲ್ಲಾಧ್ಯಕ್ಷರಲ್ಲಿ ಮನವಿ ಮಾಡಲಾಗುವುದು ಎಂದು ಜಿ.ಬಿ. ಮಾಸಣಗಿ ತಿಳಿಸಿದರು.
ಸಂಜೆ ಬಹಿರಂಗ ಅಧಿವೇಶನ, ನಿರ್ಣಯ ಮಂಡನೆ, ಸಮಾರೋಪ ಸಮಾರಂಭ ನಡೆಯಲಿದೆ. ಹೊಸರಿತ್ತಿಯ ಗುದ್ದಲಿ ಶಿವಯೋಗೀಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು. ಹೊಸಮಠದ ಶಾಂತಲಿಂಗ ಶ್ರೀಗಳು ಉಪಸ್ಥಿತರಿರುವರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರಿಗೆ ಸನ್ಮಾನಿಸಲಾಗುವುದು. ಸಮ್ಮೇಳನದ ಎರಡೂ ದಿನ ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಸಣಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷಪ್ಪ ಪಡಿಗೋದಿ, ಪ್ರಭು ಹಲಗೇರಿ, ಖಜಾಂಚಿ ಎಂ.ಎಂ. ಪಾಟೀಲ, ಪದಾಧಿಕಾರಿಗಳಾದ ಪ್ರಭು ಹಿಟ್ನಳ್ಳಿ, ವೈ.ಬಿ. ಆಲದಕಟ್ಟಿ, ಸುರೇಶ ಹೊಸಮನಿ ಸೇರಿದಂತೆ ಮತ್ತಿತರರು ಹಾಜರಿದ್ದರು.