ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಉದಾಸಿ ರಾಜಿನಾಮೆ: ಬಿಜೆಪಿಗೆ ಧಕ್ಕೆಯಿಲ್ಲ

Mainashree
Updated On : 25 Jan 2013, 10:50 am

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 24
ಸಚಿವ ಸಿ.ಎಂ. ಉದಾಸಿ ರಾಜಿನಾಮೆಯಿಂದ ಬಿಜೆಪಿಗೆ ಯಾವುದೇ ಧಕ್ಕೆಯಿಲ್ಲ. ರಾಜಿನಾಮೆ ನಿರೀಕ್ಷಿತವಾಗಿದ್ದು, 3 ತಿಂಗಳಿಂದ ಇದ್ದ ಊಹಾಪೋಹಗಳಿಗೆ ಅಂತಿಮ ತೆರೆ ಬಿದ್ದಂತಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.
ಸ್ಥಳೀಯ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ, ಉದಾಸಿ ರಾಜಿನಾಮೆಯಿಂದ ಬಿಜೆಪಿಗೆ ತೊಂದರೆಯಿಲ್ಲ. ಘಟಾನುಘಟಿಗಳೇ ಪಕ್ಷ ತೊರೆದಾಗಲೂ ಕುಗ್ಗದ ಬಿಜೆಪಿಗೆ ಈಗ ಯಾವುದೇ ಧಕ್ಕೆ ಇಲ್ಲ. 2009ರಲ್ಲೇ ತಮ್ಮ ಪುತ್ರ ಶಿವಕುಮಾರ ಉದಾಸಿಗೆ ಸಂಸದ ಸ್ಥಾನ ಕಲ್ಪಿಸಿದಲ್ಲಿ ತಾವು ರಾಜಿನಾಮೆ ನೀಡುವುದಾಗಿ ತಿಳಿಸಿದ್ದರು. ಆದರೆ, ಸಂಸದನಾಗಿ ಶಿವಕುಮಾರ ಉದಾಸಿ ಆಯ್ಕೆಯಾದರೂ ಮಾತು ತಪ್ಪಿದ ಸಿ.ಎಂ. ಉದಾಸಿ ಈತನಕ ಮುಂದುವರೆದಿದ್ದಾರೆ. ಈಗ ವೈಯಕ್ತಿಕ ಹಿತಾಸಕ್ತಿಗಾಗಿ ರಾಜಿನಾಮೆ ನೀಡಿದ್ದು, ಪಕ್ಷಕ್ಕೆ ಹಾನಿಯಿಲ್ಲ. ಈಗ ನೈತಿಕ ಹೊಣೆ ಹೊತ್ತು ಉದಾಸಿಯವರ ಪುತ್ರ ಶಿವಕುಮಾರ ಉದಾಸಿಯವರೂ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದರು.
ಬಿಜೆಪಿ ಸಮರ್ಥ: ಕುಟುಂಬ ರಾಜಕಾರಣ ಬಿಜೆಪಿಯಲ್ಲಿರಲಿಲ್ಲ. ಈಗಲೂ ಅವಕಾಶವಿಲ್ಲ. ಉದಾಸಿ ದ್ವಯರು ಬಿಜೆಪಿಯಲ್ಲಿದ್ದು ಪಕ್ಷದ ತೇಜೋವಧೆ ಮಾಡದೆ ಪಕ್ಷ ತೊರೆಯುವುದೇ ಒಳಿತು. ಪಕ್ಷದ ಮೂವರು ಶಾಸಕರ ಜತೆ ಕೆಲವೇ ಕಾರ್ಯಕರ್ತರು ಬಿಜೆಪಿ ತೊರೆಯಬಹುದು. ಆದರೆ, ಬಿಜೆಪಿ ಮೊದಲಿನಷ್ಟೇ ಸಮರ್ಥವಾಗಿದೆ. ಇದಕ್ಕೆ ಮುಂದಿನಚುನಾವಣೆ ಫಲಿತಾಂಶವೇ ಸಾಕ್ಷಿಯಾಗಲಿದೆ ಎಂದರು.
ಚೌಡಯ್ಯ ಪ್ರಾಧಿಕಾರಕ್ಕೆ ಒಲವು: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆ ಸಿಎಂ ಜಗದೀಶ ಶೆಟ್ಟರ್ ಒಲವು ತೋರಿದ್ದು, ಶ್ರೀಗಳ ಹಾಗೂ ಸಮಾಜ ಬಾಂಧವರ ನಿಲುವು ಅರಿತು ಅಗತ್ಯ ದಾಖಲಾತಿ ಹಾಗೂ ಮನವಿ ಸಲ್ಲಿಸುವಂತೆ ತಿಳಿಸಿದ್ದಾರೆ. ಈ ಕುರಿತಂತೆ ಹಲವು ಸುತ್ತಿನ ಚರ್ಚೆಗಳು ಫಲ ನೀಡಿವೆ. ಪ್ರಾಧಿಕಾರ ರಚನೆ ಸಂಬಂಧ ಬಜೆಟ್ ಅವಧಿಯಲ್ಲಿ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ ಎಂದರು.
ಪದ ಪ್ರಯೋಗ ಅಸಂಬದ್ಧ: ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ಮಾಜಿ ಸಿಎಂ ಬಿಎಸ್‌ವೈ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕುರಿತು ಏಕವಚನ ಪ್ರಯೋಗ ಖಂಡಿಸಿದ ಜಿಲ್ಲಾಧ್ಯಕ್ಷ ಸೋಮಣ್ಣ ಬೇವಿನಮರದ, ಮುಖ್ಯಮಂತ್ರಿಯಾಗಿ ಆಡಳಿತ ನಿರ್ವಹಿಸಿದವರು, ಹಿರಿಯರಾದ ಬಿಎಸ್‌ವೈ ಹೀಗೆ ಮಾತನಾಡಬಾರದಿತ್ತೆಂದು ಖಂಡಿಸಿದರು.
ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಂದ್ರ ಕಟಕೋಳ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸಿದ್ದರಾಜ ಕಲಕೋಟಿ, ನಗರಸಭೆ ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ, ಪ್ರಭು ಹಿಟ್ನಳ್ಳಿ, ಮಂಜುನಾಥ ಪುಥಳೇಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement