ಭಿನ್ನಾಭಿಪ್ರಾಯ ಮರೆತು ಸಮಾಜ ಸಂಘಟಿಸಿ
ಕನ್ನಡ್ರಪ್ರಭ ವಾರ್ತೆ, ರಾಣಿಬೆನ್ನೂರು, ಜ.24
ರಾಜ್ಯ ನೇಕಾರ ವೇದಿಕೆಯಿಂದ ಗುರುತಿಸಿರುವ ಎಲ್ಲಾ ಉಪ ಪಂಗಡದ ಮುಖಂಡರು ತಮ್ಮ ಆಂತರಿಕ ಬಿನ್ನಾಭಿಪ್ರಾಯ ಮರೆತು ವೇದಿಕೆಯಡಿ ಒಂದಾದಲ್ಲಿ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ರಾಜ್ಯ ನೇಕಾರ ಸಮಾಜ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಶೆಟ್ಟರ್ ಸಮಾಜ ಬಾಂಧವರಿಗೆ ಕರೆ ನೀಡಿದರು.
ನಗರದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನೇಕಾರ ಸಮಾಜದವರೆಂದು ಗುರುತಿಸಿಕೊಂಡಿರುವ ಜನಾಂಗದವರೆಲ್ಲಾ ಸಂಘಟನೆಯ ಕೊರತೆಯಿಂದಾಗಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ನೇಕಾರ ಸಮಾಜದವರ ಪ್ರಕಾರ ಸುಮಾರು 70ರಿಂದ 80 ಲಕ್ಷ ಜನ ನಾವಿದ್ದೇವೆ. ಸರ್ಕಾರವೆ ಹಂತ ಹಂತವಾಗಿ ನಮ್ಮನ್ನು ಗುರುತಿಸುವ ಮಟ್ಟಕ್ಕೆ ನಾವು ಬೆಳೆಯಬೇಕು.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರೊಂದಿಗೆ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವ ಮಟ್ಟಕ್ಕೆ ಮಕ್ಕಳನ್ನು ಬೆಳೆಸಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಉಪ ಪಂಗಡದವರೆಲ್ಲಾ ನೇಕಾರ ವೇದಿಕೆಯೊಂದಿಗೆ ಒಂದಾಗಲು ಮುಂದಾಗಬೇಕೆಂದು ಸಮಾಜ ಬಾಂಧವರಿಗೆ ಕರೆ ನೀಡಿದರು.
ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಡಾ. ಬಸವರಾಜ ಕೇಲಗಾರ ಪ್ರಾಸ್ತಾವಿಕ ಮಾತನಾಡಿ, ನೇಕಾರ ಸಮಾಜ ಒಂದಾಗಿ ಹೋರಾಟ ನಡೆಸಿದ್ದರ ಫಲವಾಗಿ ರಾಣಿಬೆನ್ನೂರು ನಗರಸಭೆ ಮತ್ತು ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ಹಾಗೂ ಸ್ಥಾಯಿ ಸಮಿತಿ ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು. ಆದ್ದರಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮಾಜ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಗುಳೇದಗುಡ್ಡದ ಗುರುಶಿದ್ದೇಶ್ವರಮಠದ ಬಸವರಾಜ ಪಟ್ಟದಾರ್ಯ ಶ್ರೀಗಳು, ಹರಿಹರದ ಸದ್ಗುರು ಸಿದ್ಧಾಶ್ರಮದ ಪ್ರಭುಲಿಂಗ ಶ್ರೀ ಹಾಗೂ ಬೆಟಗೇರಿ ಕುರುಹಿನಶೆಟ್ಟಿ ಸಮಾಜದ ಕುಲಗುರು ನೀಲಕಂಠೇಶ್ವರ ಶ್ರೀಗಳು ಸಾನ್ನಿದ್ಯ ವಹಿಸಿದ್ದರು.
ಧಾರವಾಡದ ಬಸವರಾಜ ಗುಬ್ಬಿ, ಚಿತ್ರದುರ್ಗದ ಗೋವಿಂದಪ್ಪ ಶಶಿಧರ, ರಾಣಿಬೆನ್ನೂರು ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶಂಕ್ರಣ್ಣ ನ್ಯಾಮತಿ, ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಗಣೇಶ ಶಿರಗೂರ, ಪಟ್ಟಸಾಲಿ ಸಮಾಜ ಸುಧಾರಣಾ ಸಮಿತಿ ಅಧ್ಯಕ್ಷ ವೀರಣ್ಣ ಚಿನ್ನಿಕಟ್ಟಿ, ಪದ್ಮಸಾಲಿ ಸಮಾಜದ ಅಧ್ಯಕ್ಷ ಕರಬಸಪ್ಪ ಹಳಹಳ್ಳಿ, ಸ್ವಕುಳ ಸಾಳಿ ಸಮಾಜದ ಅಧ್ಯಕ್ಷ ಖಂಡೆಪ್ಪ ರೋಖಡೆ, ಕುರುಹಿನಶೆಟ್ಟಿ ಸಮಾಜದ ಮುಖಂಡ ಹನುಮಂತಪ್ಪ ಅಮವಾಸಿ, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ನಾರಾಯಣಪ್ಪ ಕೋರ್ಪಡೆ, ತೋಗಟವೀರ ಸಮಾಜದ ಅಧ್ಯಕ್ಷ ವೇಂಕಟೇಶ ತೊಗಟವೀರ, ಸೂರ್ಯವಂಶಿ ಕ್ಷತ್ರೀಯ ಸಮಾಜದ ಅಧ್ಯಕ್ಷ ಹನುಮಂತಪ್ಪ ಕದರಮಂಡಲಗಿ, ತಾಪಂ ಅಧ್ಯಕ್ಷೆ ಶಾರದಾ ಲಮಾಣಿ, ನಗರಸಭೆ ಮಾಜಿ ಉಪಾಧ್ಯಕ್ಷೆ ಕಮಲಾಕ್ಷಿ ಚಿನ್ನಿಕಟ್ಟಿ, ರಮೇಶ ಗುತ್ತಲ, ಗೋಪಾಲ ಗುತ್ತಲ, ಸಂಕಪ್ಪ ಮಾರನಾಳ, ಶಿವಾನಂದ ಬಾಗಾದಿ ಉಪಸ್ಥಿತರಿದ್ದರು.