ಶಿಂಧೆ ಹೇಳಿಕೆ ಖಂಡಿಸಿ ಬೈಕ್ ರ್ಯಾಲಿ
ರಾಣಿಬೆನ್ನೂರು: ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡುತ್ತಿರುವ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರನ್ನು ಸಂಪುಟದಿಂದ ಕಿತ್ತು ಹಾಕಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ತಾಲೂಕು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಬೈಕ್ ರ್ಯಾಲಿ ನಡೆಸಿದರು.
ನಗರದ ಬಸ್ ನಿಲ್ದಾಣ ರಸ್ತೆಯಲ್ಲಿರುವ ತಾಲೂಕು ಬಿಜೆಪಿ ಕಾರ್ಯಾಲಯದಲ್ಲಿ ಸೇರಿದ್ದ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ, ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಿಂಧೆ ವಿರುದ್ಧ ಧಿಕ್ಕಾರ ಕೂಗುತ್ತ ತಹಸೀಲ್ದಾರ್ ಕಚೇರಿ ಎದುರು ಜಮಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ಬಿಜೆಪಿ ಅಧ್ಯಕ್ಷ ಡಾ ಬಸವರಾಜ ಕೇಲಗಾರ ಮಾತನಾಡಿ, ಶಿಂಧೆ ಅವರು ದೇಶದ ರಕ್ಷಣೆಗಾಗಿ ಶ್ರಮಿಸುವ ವೀರಯೋಧರ ರುಂಡ ಕತ್ತರಿಸಿದ ಪಾಕಿಸ್ತಾನವನ್ನು, ದೇಶದಲ್ಲಿದ್ದುಕೊಂಡೇ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವ ಉಗ್ರಗಾಮಿಗಳನ್ನು ಹಾಗೂ ದೇಶದ್ರೋಹದ ಹೇಳಿಕೆ ನೀಡಿದ ಓವೈಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಉದ್ರೇಕಕಾರಿ ಹೇಳಿಕೆ ನೀಡಿದ್ದಾರೆ. ದೇಶದ ಸಮಸ್ತ ಹಿಂದುಗಳು, ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ವ್ಯಕ್ತಿತ್ವಗಳಿಗೆ ಧಕ್ಕೆ ತಂದಿದ್ದಾರೆ. ಶಿಂಧೆ ಅವರನ್ನು ಶೀಘ್ರ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ದೇಶದ ಜನತೆ ಮನ ನೋಯಿಸಿದ ಸಚಿವರ ವಿರುದ್ಧ ಕ್ರಮ ಕೈಗೊಳಳಲು ಮೀನ-ಮೇಷ ಎಣಿಸುತ್ತಿರುವುದನ್ನು ನೋಡಿದರೆ ಪ್ರಧಾನಿ ಮನಮೋಹನ ಸಿಂಗ್ ರಬ್ಬರ್ ಸ್ಟಾಂಪ್ ಆಗಿದ್ದಾರೆ ಎಂದು ಭಾಸವಾಗುತ್ತಿದೆ ಎಂದು ಕಿಡಿಕಾರಿದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಮಾರ ಎಂ.ಪಿ., ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಜಂಬಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರಣ್ಣ ಅಂಗಡಿ, ಆರೆಸ್ಸೆಸ್ ಜಿಲ್ಲಾ ಕಾರ್ಯವಾಹಕ ಅಶೋಕ ನಾಡಿಗೇರ, ವಿಶ್ವನಾಥ ಹೊಳೆಬಾಗಿ ಮಾತನಾಡಿದರು. ಪ್ರತಿಭಟನಾಕಾರರಿಂದ ಉಪ ತಹಸೀಲ್ದಾರ ರಿತ್ತಿ ಮನವಿ ಸ್ವೀಕರಿಸಿದರು. ತಾಲೂಕು ಯುವ ಬಿಜೆಪಿ ಮುಖಂಡ ಕಿರಣ ಅಂಗಡಿ, ಸಂಕಪ್ಪ ಮಾರನಾಳ, ಬಸವರಾಜ ಲಕ್ಷ್ಮೇಶರ, ಮಲ್ಲಿಕಾರ್ಜುನ ಪೂಜಾರ, ಪ್ರವೀಣ ಕುಮಾರ ಮಲ್ಲಾಡದ, ಪ್ರಕಾಶ ಮಣೆಗಾರ ಇದ್ದರು.