ಶೀಘ್ರ ಸಚಿವ ಶಿಂಧೆ ವಜಾಗೊಳಿಸಿ
ಬ್ಯಾಡಗಿ: ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ ಶಿಂಧೆ ಕೇಸರಿ ಭಯೋತ್ಪಾದನೆ ಕುರಿತು ಮಾತನಾಡಿದ್ದು, ದೇಶದ ಏಕತೆಗೆ ಧಕ್ಕೆ ಬರುವಂತಿದೆ. ತಕ್ಷಣ ಕಾಂಗ್ರೆಸ್ ಹೈಕಮಾಂಡ್ ಕೇಂದ್ರ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಗುರುವಾರ ತಾಲೂಕು ಬಿಜೆಪಿ ಘಟಕ ಕಾರ್ಯಕರ್ತರು ಪ್ರತಿಭಟಿಸಿದರು.
ಕೇಂದ್ರ ಸಚಿವರ ವಿರುದ್ಧ ಘೋಷಣೆಗಳೊಂದಿಗೆ ಬಿಜೆಪಿ ಕಾರ್ಯಾಲಯದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿದ ಕಾರ್ಯಕರ್ತರು ಬಳಿಕ ಮನವಿ ಸಲ್ಲಿಸಿದರು.
ಎಪಿಎಂಸಿ ನಿರ್ದೇಶಕ ಶಂಕರಗೌಡ ಪಾಟೀಲ ಮಾತನಾಡಿ, ಗೃಹ ಸಚಿವರ ಹೇಳಿಕೆ ಜಾತ್ಯತೀತ ತಳಹದಿಯಲ್ಲಿ ಬದುಕುತ್ತಿರುವ ರಾಷ್ಟ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿದೆ. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳೇ ಇಂತಹ ಅಸಂಬದ್ಧ ಹಾಗೂ ಅಪ್ರಸ್ತುತ ಹೇಳಿಕೆಗಳು ರಾಷ್ಟ್ರದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡಲಿವೆ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ,
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಣ್ಣ ಉಕ್ಕುಂದ, ಪುರಸಭೆ ಮಾಜಿ ಅಧ್ಯಕ್ಷ ಶಂಭಣ್ಣ ಬಿದರಿ, ಯುವಮೋರ್ಚಾ ಅಧ್ಯಕ್ಷ ಪರಶುರಾಮ ಉಜನಿಕೊಪ್ಪ, ತಾಪಂ ಮಾಜಿ ಅಧ್ಯಕ್ಷ ಜಯಣ್ಣ ಮಲ್ಲಿಗಾರ, ಎಪಿಎಂಸಿ ಸದಸ್ಯ ಮೌಲಾಸಾಬ್ ಶಿಡೇನೂರ, ಮುಖಂಡ ವೀರೇಂದ್ರ ಶೆಟ್ಟರ್, ಆರ್ಎಸ್ಎಸ್ ತಾಲೂಕು ಸಂಚಾಲಕ ಗುರುನಾಥ ಅಂದಲಗಿ, ಸುಶೀಲ, ತೊಗಟವೀರ, ನಂದೀಶ ವೀರನಗೌಡ, ಸುರೇಶ ಕುಡಿಕೇರಿ, ಚಿಕ್ಕಪ್ಪ ಛತ್ರದ, ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.