ಸಂಪುಟದಿಂದ ಶಿಂಧೆ ಕಿತ್ತೊಗೆಯಿರಿ: ಬಿಜೆಪಿ ಆಗ್ರಹ
ಹಾನಗಲ್ಲ: ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳು ಹಿಂದೂ ಭಯೋತ್ಪಾದನೆ, ಕೇಸರೀಕರಣದಂತಹ ಆತಂಕಕಾರಿ ಚಟುವಟಕೆ ನಡೆಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದ್ದು, ದೇಶ ವಿರೋಧಿ ಹಿಂದೂ ಹೇಳಿಕೆ ನೀಡಿದ ಶಿಂಧೆ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಹಾನಗಲ್ಲ ತಾಲೂಕು ಬಿಜೆಪಿ ಘಟಕ ಪ್ರತಿಭಟನೆ ನಡೆಸಿತು.
ಪ್ರತಿಕೃತಿ ದಹನ: ಗುರುವಾರ ಮಧ್ಯಾಹ್ನ ಇಲ್ಲಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಗೃಹ ಸಚಿವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರಧಾನಿ ಮನಮೋಹನಸಿಂಗ್ ಹಾಗೂ ಸೋನಿಯಾ ಗಾಂಧಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ಸಂದರ್ಭ ರಸ್ತೆ ತಡೆ ನಡೆಸಿ ಗೃಹ ಸಚಿವ ಶಿಂಧೆ ಪ್ರತಿಕೃತಿ ದಹಿಸಿದರು.
ನಾಗರಿಕ ಚಿಂತನೆಗೆ ಅಪಪ್ರಚಾರ: ನಂತರ ತಹಸೀಲ್ದಾರ್ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಬಿಜೆಪಿ ಮುಖಂಡರು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಶಿಂಧೆ ಅವರ ಹೇಳಿಕೆಯು ಭಾರತೀಯ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ನಾಗರಿಕ ಚಿಂತನೆಗಳಿಗೆ ಅಪಚಾರ ಮಾಡಿದಂತಾಗಿದೆ.
ಹಿಂದೂಗಳ ಭಾವನೆಗೆ ಧಕ್ಕೆ: ಸರ್ವಧರ್ಮ ಸಮಭಾವ, ಪರಧರ್ಮ ಸಹಿಷ್ಣುತೆ ಬೋಧಿಸುವ ಹಿಂದೂ ಧರ್ಮದ ಇತಿಹಾಸದಲ್ಲಿ ಭಯೋತ್ಪಾದನೆ ಎಂಬ ಪದ ಎಲ್ಲಿಯೂ ಕಾಣದು. ಇಂತಹ ಧರ್ಮದ ಮಹಾನ್ ನಾಯಕ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆಯನ್ನು ಇಡೀ ವಿಶ್ವವೇ ಆಚರಿಸುತ್ತಿರುವ ಈ ಸಂದರ್ಭ ಕಾಂಗ್ರೆಸ್ ನಾಯಕರ ಹೇಳಿಕೆ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಜಿ.ಬಿ. ಗುಡ್ಡಪ್ಪನವರ, ಪ್ರಧಾನ ಕಾರ್ಯದರ್ಶಿ ಅನಂತವಿಕಾಸ ನಿಂಗೋಜಿ, ಜಿಪಂ ಸದಸ್ಯ ಬಸವರಾಜ ಹಾದಿಮನಿ, ಮಾಜಿ ಜಿಪಂ ಸದಸ್ಯ ಮಿಯ್ಯಾಜಾನ ಕಂಬಳಿ, ಮುಖಂಡರಾದ ಸಂಜಯ ಬೇದ್ರೆ, ದೀಪಕ ಕಿತ್ತೂರ, ದಿನೇಶ ಕುಲಕರ್ಣಿ, ಗೋಪಾಲ ಮೂಡ್ಲಿಯವರ, ಈರಣ್ಣ ನಿಂಬಣ್ಣನವರ, ಕೃಷ್ಣಾ ಪೂಜಾರ, ಈಶ್ವರ ನಿಂಗೋಜಿ, ಮೇಕಾಜಿ ಕಲಾಲ, ರಾಮಣ್ಣ ದೊಡ್ಡಮನಿ, ಬಸವರಾಜ ಶೀಲವಂತ, ಚೇತನ ಬೆಂಡಿಗೇರಿ, ಪ್ರವೀಣ ಸುಲಾಖೆ, ವಿನಯ ಬಂಕನಾಳ, ರವಿಚಂದ್ರ ಪುರೋಹಿತ, ಮುರಳಿಧರ ಕಾಮನಹಳ್ಳಿ, ವಿನಾಯಕ ಕುಲಕರ್ಣಿ, ಎಸ್.ಆರ್. ಪಾಟೀಲ, ಮಹದೇವಪ್ಪ ಅಂಗಡಿ ಪಾಲ್ಗೊಂಡಿದ್ದರು.