ಪೈಗಂಬರ್ ಜನ್ಮದಿನ: ಮೆರವಣಿಗೆ
ರಾಣಿಬೆನ್ನೂರು: ಇಲ್ಲಿನ ಮುಸ್ಲಿಂ ಬಾಂಧವರು ಇಸ್ಲಾಂ ಧರ್ಮಗುರು ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಶುಕ್ರವಾರ ಸಂಭ್ರಮದಿಂದ ಆಚರಿಸಿದರು. ಮಸೀದಿ ಬಳಿ ಸೇರಿದ್ದ ಮುಸ್ಲಿಂ ಬಾಂಧವರು, ಕೋಟೆ ಮಸೀದಿಯಿಂದ ಎಂ.ಜಿ. ರಸ್ತೆ, ಅಂಚೆ ವೃತ್ತ, ಮೆಡ್ಲೇರಿ ವೃತ್ತ, ಬಸ್ ನಿಲ್ದಾಣ ವೃತ್ತ ಮೂಲಕ ಪಿ.ಬಿ. ರಸ್ತೆಯಲ್ಲಿ ಹಾದು ಮಸೀದಿಗೆ ಮರಳಿದರು. ವಾಹನಗಳನ್ನು ಅಲಂಕರಿಸಿ, ದೋಣಿ, ಹಡಗು, ಮಸೀದಿ ಹಾಗೂ ಮಂದಿರಗಳ ಸ್ತಬ್ಧ ಚಿತ್ರಗಳನ್ನು ಹಾಗೂ ಪೈಗಂಬರ್ ಸಂದೇಶಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಜೆಡಿಎಸ್ ಅಲ್ಪ ಸಂಖ್ಯಾತರ ರಾಜ್ಯ ಉಪಾಧ್ಯಕ್ಷ ಮನ್ವರುದ್ದಿನ್ ಕಮದೋಡ, ಬಿಬಿಎಂಪಿ ಮಾಜಿ ಉಪ ಮೇಯರ್ ಆರ್. ಶಂಕರ್, ವಿ.ಸಿ. ಪಾಟೀಲ, ತಾಲೂಕು ಕಾಂಗ್ರೆಸ್ ಮುಖಂಡ ಮಂಜುನಾಥ ಕಂಬಳಿ, ಮಣಿ ಪವಾರ, ರಾಜು ಅಡಿವೆಪ್ಪನವರ, ಅಂಜುಮನ್ ಅಧ್ಯಕ್ಷ ರಟ್ಟಿಹಳ್ಳಿ, ಕಾರ್ಯದರ್ಶಿ ನಸರುಲ್ಲಾ ಮುಲ್ಲಾ, ಅಮೀರ ಅಹ್ಮದ ನಾರಂಗಿ ಭಾಗವಹಿಸಿದ್ದರು.