ಪ್ರಾಥಮಿಕ ಶಿಕ್ಷಣ ಮಹತ್ವದ್ದು
ಸವಣೂರು: ಶಾಲಾ ಶಿಕ್ಷಣದಲ್ಲಿಯ ವ್ಯಾಸಂಗದ ಹಂತಗಳಲ್ಲಿ ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿಗಳ ಬದುಕು ರೂಪಿಸುವಲ್ಲಿ ಮಹತ್ವ ಪಡೆದುಕೊಂಡಿದೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಹೇಳಿದರು.
ಹತ್ತಿಮತ್ತೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನ ಸಮಾರಂಭದಲ್ಲಿ ಗುಲ್ಬರ್ಗಾದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮಕ್ಕಳನ್ನು ಸನ್ಮಾನಿಸಿ, ಮಾತನಾಡಿದರು.
ಶಾಲಾ ಅಂಗಳಕ್ಕೆ ಕಾಲಿಡುವ ಪ್ರತಿಯೊಂದು ಮಗುವಿನಲ್ಲಿ ತನ್ನದೇ ಆದ ಹೊಸ ಕಲ್ಪನೆಗಳು ತುಂಬಿಕೊಂಡಿರುತ್ತವೆ. ಅವುಗಳನ್ನು ಸಾಕಾರಗೊಳಿಸಲು ಶಿಕ್ಷಕ ಬಳಗ ಪ್ರಯತ್ನಿಸಬೇಕು. ಅಂದಾಗ ಮಾತ್ರ ನಮ್ಮ ಮಕ್ಕಳು ಸೃಜನಶೀಲರಾಗಿ ಧನಾತ್ಮಕ ಚಿಂತನೆ ಮೈಗೂಡಿಸಿಕೊಂಡು ಸಾಂಸ್ಕೃತಿಕ ಲವಲವಿಕೆ ಹೊಂದಿ ಭಾಷಾ ಪ್ರೌಢಿಮೆ ಸಾಧಿಸುವರು. ಈ ಕೆಲಸ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿಮತ್ತೂರಿನಲ್ಲಿ ನಡೆಯುತ್ತಿರುವುದು ಪ್ರಶಂಸನೀಯ ಎಂದರು.
ಈ ಸಂದರ್ಭ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿ ಮಗುವಿಗೆ ಶಾಸಕರು ರು. 1 ಸಾವಿರ ಪ್ರೋತ್ಸಾಹ ಧನ ಹಾಗೂ ಗ್ರಾಮ ಪಂಚಾಯಿತಿಯಿಂದ ರು. 5 ಸಾವಿರ ನಗದು ಪುರಸ್ಕಾರ ನೀಡಿದರು. ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ರುದ್ರಗೌಡ ಪಾಟೀಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ತಾಪಂ ಸದಸ್ಯೆ ಪ್ರೇಮಾ ಶಿಗ್ಲಿ, ಗ್ರಾಪಂ ಅಧ್ಯಕ್ಷೆ ಹಯಾತಬಿ ಬೂದಿಹಾಳ, ಲಲಿತಾ ಕೋಳಿವಾಡ, ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಶಾಲೆಯ ಶಿಕ್ಷಕರ ಪಾಲ್ಗೊಂಡಿದ್ದರು.