ನೀರು ಸರಬರಾಜು ವ್ಯತ್ಯಯ (ಸುದ್ದಿ ಸಂಕ್ಷೇಪ)
ಬ್ಯಾಡಗಿ: ರಾಣೆಬೆನ್ನೂರು ತಾಲೂಕು ಮುದೇನೂರನಿಂದ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ಕುಡಿಯುವ ನೀರು ಪೈಪ್‌ಲೈನ್ ದುರಸ್ತಿಯಿರುವ ಕಾರಣ ಇಂದು(ಜ. 27) ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಎಂದಿನಂತೆ ಸಹಕರಿಸಲು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ವಿರೂಪಾಕ್ಷ ಪೂಜಾರ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇಂದು ಕಾರ್ಯಕರ್ತರ ಸಭೆ
ಹಾನಗಲ್ಲ: ಜಾತ್ಯಾತೀತ ಜನತಾದಳ ಹಾನಗಲ್ಲ ತಾಲೂಕು ಘಟಕದ ಕಾರ್ಯಕರ್ತರ ಸಭೆ ಜ. 28ರಂದು ಗೆಜ್ಜೆಹಳ್ಳಿ ಪ್ರವಾಸಿ ಮಂದಿರದ ಆವರಣದಲ್ಲಿ ನಡೆಯಲಿದೆ. ಸೋಮವಾರ ಬೆಳಗ್ಗೆ 11ಕ್ಕೆ ನಡೆಯುವ ಸಭೆಯಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಖ್ವಾಜಾ ಮೊಹಿದ್ದೀನ ಅಣ್ಣಿಗೇರಿ ಅಧ್ಯಕ್ಷತೆ ವಹಿಸುವರು. ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಚರ್ಚಿಸಲಾಗುವುದು. ತಾಲೂಕಿನ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು ಪಾಲ್ಗೊಂಡು ಸಲಹೆ-ಸೂಚನೆ ನೀಡಬೇಕೆಂದು ಪಕ್ಷದ ಕಾರ್ಯದರ್ಶಿ ವಿಷ್ಣು ಕಮ್ಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆಯಿಂದ ಕಾಂಗ್ರೆಸ್ ಪೂರ್ವಭಾವಿ ಸಭೆ
ಹಾನಗಲ್ಲ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ದುರಾಡಳಿತ, ಭ್ರಷ್ಟಾಚಾರ, ರೈತರಿಗೆ ಬೆಳೆ ವಿಮೆ ಬಿಡುಗಡೆಯಲ್ಲಿ ವಿಫಲತೆ, ವಿವಿಧ ಮಾಶಾಸನಗಳನ್ನು ತಡೆ ಹಿಡಿದಿರುವ ಕುರಿತು ಪ್ರತಿಭಟಿಸಲು, ಕಾಂಗ್ರೆಸ್ ವರದಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಜ. 28 ಹಾಗೂ 29ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಜ. 28ರಂದು ಬೆಳಗ್ಗೆ 10ಕ್ಕೆ ಬೆಳಗಾಲಪೇಟೆ, 1 ಘಂಟೆಗೆ ಆಡೂರು, 4 ಘಂಟೆಗೆ ಅಕ್ಕಿಆಲೂರು, 29ರಂದು ಬೆಳಗ್ಗೆ 10ಕ್ಕೆ ತಿಳವಳ್ಳಿ, ಮಧ್ಯಾಹ್ನ 1ಕ್ಕೆ ಗೆಜ್ಜೆಹಳ್ಳಿ, 4ಕ್ಕೆ ಬಮ್ಮನಹಳ್ಳಿ ಹಾಗೂ ಸಂಜೆ 6ಕ್ಕೆ ಹಾನಗಲ್ಲಿನಲ್ಲಿ ಸಭೆ ಕರೆಯಲಾಗಿದೆ. ವಿಧಾನಸಭೆ ಮಾಜಿ ಉಪಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಹರ ತಹಸೀಲ್ದಾರ್ ಉಪಸ್ಥಿತರಿದ್ದು, ಮಾರ್ಗದರ್ಶನ ನೀಡಲಿದ್ದಾರೆ. ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಕಾರ್ಯಕರ್ತರು ವಿವಿಧ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡು ಸಲಹೆ-ಸೂಚನೆ ನೀಡಬೇಕೆಂದು ಪಕ್ಷದ ವಕ್ತಾರ ಕೆ.ಎಲ್.ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶಪಾಂಡೆ ಕಾಂಗ್ರೆಸ್ ವಕ್ತಾರ
ಹಾನಗಲ್ಲ: ತಾಲೂಕು ಕಾಂಗ್ರೆಸ್ ಪಕ್ಷದ ವಕ್ತಾರರನ್ನಾಗಿ ಇಲ್ಲಿನ ವಿಶ್ರಾಂತ ಶಿಕ್ಷಕ ಕೆ.ಎಲ್. ದೇಶಪಾಂಡೆ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಹರ ತಹಸೀಲ್ದಾರ್ ನೇಮಕಗೊಳಿಸಿ ಆದೇಶಿಸಿದ್ದಾರೆ.ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಂಪೂರ್ಣ ತೊಡಗಿಕೊಂಡು ಪಕ್ಷದ ಸಂಘಟನೆಗೆ ಮುಂದಾಗಬೇಕೆಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.