ಯುವಕರು ಗಣರಾಜ್ಯೋತ್ಸವ ಉದ್ದೇಶ ಈಡೇರಿಸಿ
ಕನ್ನಡಪ್ರಭ ವಾರ್ತೆ, ಹಾವೇರಿ, ಜ.26
1947ರ ಆ. 15ರಂದು ಸ್ವಾತಂತ್ರ್ಯ ಪಡೆಯುವುದರೊಂದಿಗೆ 200 ವರ್ಷಗಳ ಬ್ರಿಟೀಷರ ದಾಸ್ಯದ ಸರಪಳಿಯಿಂದ ಕಳಚಿಕೊಂಡ ಭಾರತ, 1950ರ ಜನವರಿ 26ರಂದು ಸಂವಿಧಾನ ಅಂಗೀಕರಿಸಿ, ವಿಶ್ವದಲ್ಲಿ ತಾನೂ ಒಂದು ಸಾರ್ವಭೌಮ ರಾಷ್ಟ್ರವೆಂದು ಸಾರಿದುದರ ದ್ಯೋತಕವಾಗಿ ನಾವೆಲ್ಲರೂ ಒಂದಾದೆವು ಎಂದು ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ 64ನೇ ಗಣರಾಜ್ಯೋತ್ಸವ ಅಂಗವಾಗಿ ನಡೆದ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಜವಾಬ್ದಾರಿ ನಿಭಾಯಿಸಿ: ಭಾರತಕ್ಕೀಗ 66ರ ಹರೆಯ. ದೇಶಕ್ಕೆ ನಮ್ಮದೇ ಸಂವಿಧಾನ ಪ್ರಾಪ್ತವಾಗಿ 63 ವರ್ಷ ಸಂದಿದ್ದೂ ಒಂದು ಸ್ಮರಣಾರ್ಹ ವಿಚಾರ. ಸಂವಿಧಾನ ಇತರ ವಿಷಯಗಳೊಂದಿಗೆ ಮುಖ್ಯವಾಗಿ ಸರ್ಕಾರದ ಅಧಿಕಾರ ಮತ್ತು ಜನತೆಯ ಹಕ್ಕುಗಳನ್ನು ಸಮನ್ವಯಗೊಳಿಸುವ ನಿಯಮಗಳ ಸಂಕಲನ. ಅದು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹಾಗೂ ನಮ್ಮ ಒಕ್ಕೂಟದ ರಚನೆ ಮತ್ತು ಆಡಳಿತ ವ್ಯವಸ್ಥೆ ಗೊತ್ತುಪಡಿಸುವ ರಾಷ್ಟ್ರದ ಅತಿ ಮುಖ್ಯ ದಾಖಲೆ ಹಾಗೂ ಎಲ್ಲ ಕಾನೂನುಗಳ ತಾಯಿ. ನಮ್ಮ ಯುವಜನರು ಗಣರಾಜ್ಯೋತ್ಸವ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ.
ಏತ ನೀರಾವರಿ ಸಾಕಾರಗೊಳ್ಳಲಿದೆ: ಹಾವೇರಿ ಜಿಲ್ಲೆ ಕೃಷಿ ಪ್ರಧಾನವಾಗಿರುವಂತೆ ಉದ್ಯಮ ರಂಗದಲ್ಲೂ ಗುರುತಿಸುವ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಉಕ್ಕು ಉದ್ಯಮ ಸಾಕಾರಗೊಳ್ಳುವ ದಿನಗಳು ದೂರವಿಲ್ಲ. ದೇಶದಲ್ಲಿಯೇ ವಿನೂತನ ತುಂತುರು ನೀರಾವರಿ ಯೋಜನೆ ಶಿಗ್ಗಾಂವಿ ಏತ ನೀರಾವರಿ ಮೂಲಕ ಸಾಕಾರಗೊಂಡಿದೆ. ಜಿಲ್ಲೆಯಲ್ಲಿ ಹಲವು ಏತನೀರಾವರಿ, ಕೆರೆಕಟ್ಟೆ ಕಾಮಗಾರಿಗಳು ತುಂಗಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳ್ಳುತ್ತಿವೆ. ಜಿಲ್ಲೆಯ 35 ಸಾವಿರ ಎಕರೆ ಪ್ರದೇಶಕ್ಕೆ ಈಗಾಗಲೇ ತುಂಗಾ ನೀರು ಲಭ್ಯವಾಗಿದ್ದು, ಮಾರ್ಚ್ ಅಂತ್ಯಕ್ಕೆ ಈ ಪ್ರಮಾಣ 1.2ಲಕ್ಷ ಎಕರೆ ಪ್ರದೇಶಕ್ಕೆ ವಿಸ್ತಾರಗೊಳ್ಳಲಿದೆ ಎಂದು ಸಂತಸ ಹಂಚಿಕೊಂಡರು.
ಅನುದಾನ: ಜಿಲ್ಲೆಯಲ್ಲಿ ಜಿಪಂ ಪ್ರಸಕ್ತ ವರ್ಷ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ರು. 158.9 ಕೋಟಿ ಮತ್ತು ಯೋಜನೇತರ ಕಾರ್ಯಕ್ರಮಗಳಿಗೆ ರು. 101ಕೋಟಿಯನ್ನು ಒದಗಿಸಿದೆ.
ಈ ಸಂದರ್ಭ ಕಳೆದ ಮೂರುವರೆ ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿ ಸಮಯದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದರು.
ಇದೇ ಸಂದರ್ಭ ಮೀಸಲು ಪೋಲಿಸ್, ನಾಗರೀಕ ಪೋಲಿಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ ಸೇರಿದಂತೆ ವಿವಿಧ ಪದಾತಿ ದಳ ಗೌರವ ವಂದನೆಯನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸಿದರು.
ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದ ಸಾಧಕರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ದೇಶಭಕ್ತಿ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭ ಶಾಸಕ ನೆಹರು ಓಲೇಕಾರ, ಅಪರ ಜಿಲ್ಲಾಧಿಕಾರಿ ಜಿ. ಜಗದೀಶ, ಉಪ ವಿಭಾಗಾಧಿಕಾರಿ ಚನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠ ಚೇತನಸಿಂಗ್ ರಾಥೋರ್, ಹೆಚ್ಚುವರಿ ವರಿಷ್ಠ ಎಂ.ಎಂ. ಅಗಡಿ, ಡಿಡಿಪಿಐ ಎಸ್.ಬಿ. ಕೊಡ್ಲಿ, ತಹಸೀಲ್ದಾರ್ ಶಿವಲಿಂಗು ಉಪಸ್ಥಿತರಿದ್ದರು.