ಯುವಶಕ್ತಿ ಸದ್ಬಳಕೆಯಿಂದ ದೇಶಾಭಿವೃದ್ಧಿ: ಮಾತನವರ
ಬ್ಯಾಡಗಿ: ದೇಶದ ಆಸ್ತಿಯಾದ ಯುವಶಕ್ತಿ ಸದ್ಬಳಕೆಯಾದಲ್ಲಿ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಜಿಪಂ ಅಧ್ಯಕ್ಷ ಶಂಕ್ರಪ್ಪ ಮಾತನವರ ಹೇಳಿದರು.
ಕದರಮಂಡಲಗಿ ಗ್ರಾಮದ ಕಾಂತೇಶ ದೇವಸ್ಥಾನ ಸಮುದಾಯ ಭವನದಲ್ಲಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಏರ್ಪಡಿಸಿದ್ದ ತಾಲೂಕು ಮಟ್ಟದ ಯುವಜನ ಮೇಳ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಪರಿಚಯಿಸುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ, ಆಸಕ್ತಿಯಿರುವ ಯುವಕರನ್ನು ಜಾನಪದ ತಳಹದಿಯಲ್ಲಿ ಪ್ರೋತ್ಸಾಹಿಸುವ ಗುರಿಯನ್ನು ಯುವಜನ ಸೇವಾ ಇಲಾಖೆ ಹೊಂದಿದ್ದು ಜನಪದ ಕಲೆಗಳನ್ನು ಜೀವಂತವಾಗಿಡುವಲ್ಲಿ ಕಲಾವಿದರು ಶ್ರಮಿಸುತ್ತಿದ್ದಾರೆ, ಆದರೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕಿದೆ ಎಂದರು.
ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ನಾಡಿನ ವಿಶಿಷ್ಟ ಸಂಸ್ಕೃತಿ, ಧಾರ್ಮಿಕ, ಸಾಮಾಜಿಕ ಹಾಗೂ ವೈವಿಧ್ಯಮಯ ಜೀವನ ಜನಪದ ಕಲೆಗಳಲ್ಲಿ ಅಡಗಿದೆ. ಟೀವಿ ಪ್ರಭಾವದಿಂದ ಯುವಕರು ಜಾನಪದ ಕಲೆಗಳನ್ನು ಮುಂದುವರಿಸಿಕೊಂಡು ಹೋಗುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ ಎಂದು ವಿಷಾದಿಸಿದರು.
ಗ್ರಾಪಂ ಅಧ್ಯಕ್ಷೆ ಕಮಲಾ ಹಮ್ಮಗಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಸಣ್ಣಲಿಂಗಪ್ಪ ಹೂಲಿಹಳ್ಳಿ, ತಾಪಂ ಸದಸ್ಯ ಮಲ್ಲಿಕಾರ್ಜುನ ಕರಿಲಿಂಗಪ್ಪನವರ, ಟಿಇಓ ಕೃಷ್ಣಮೂರ್ತಿ, ಕಾಂತೇಶ ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಕುಡುಪಲಿ, ತಾಲೂಕು ಒಕ್ಕೂಟದ ಅಧ್ಯಕ್ಷ ಶಂಕ್ರಪ್ಪ ಅಕ್ಕಿ, ಕಾರ್ಯದರ್ಶಿ ವಿ.ಕೆ. ಪಾಟೀಲ, ಶಾರದಾ ಯುವಕ ಮಂಡಳ ಅಧ್ಯಕ್ಷೆ ಗೌರಮ್ಮ ಬಾಸೂರ ಇದ್ದರು. ಸಹಾಯಕ ಯುವಜನ ಅಧಿಕಾರಿ ಆರ್.ಎಂ.ಪಾಟೀಲ ಸ್ವಾಗತಿಸಿದರು, ಸಾಕ್ಷರತಾ ಸಂಯೋಜಕಿ ನಾಗರತ್ನಾ ಹುಲ್ಲತ್ತಿ ನಿರೂಪಿಸಿದರು.