ಸರ್ವಧರ್ಮದ ಭಾರತ ವಿಶ್ವಕ್ಕೆ ಮಾದರಿ
ಬ್ಯಾಡಗಿ: ಮೂಲಭೂತ ಹಕ್ಕು ಪ್ರಕಟಿಸುವ ಮೂಲಕ ವಿವಿಧ ಧರ್ಮ, ಜಾತಿ, ಜನಾಂಗದವರನ್ನು ಶಾಸನ ಬದ್ಧವಾಗಿ ಬದುಕುವಂತೆ ಮಾಡಿರುವ ಭಾರತ ವಿಶ್ವಕ್ಕೆ ಮಾದರಿ ಎಂದು ಶಾಸಕ ಸುರೇಶಗೌಡ ಪಾಟೀಲ್ ತಿಳಿಸಿದರು.
ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 64ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೋರಾಟಗಾರರ ಕಾರ್ಯ ಶ್ಲಾಘನೀಯ: ದೇಶಭಕ್ತರ ತ್ಯಾಗ-ಬಲಿದಾನಗಳೊಂದಿಗೆ ಸುಮಾರು 2 ದಶಕಗಳ ಸುಧೀರ್ಘ ಹೋರಾಟದ ಬಳಿಕ ಬ್ರಿಟೀಷರ ಕಪಿಮುಷ್ಠಿಯಿಂದ ದೇಶವನ್ನು ಬಿಡುಗಡೆಗೊಳಿಲಾಯಿತು.
ದೇಶದಲ್ಲಿ ಹಂಚಿ ಹೋಗಿದ್ದ ವಿವಿಧ ಪ್ರಾಂತಗಳನ್ನು ಹೋರಾಟಗಾರರು ಹೋರಾಡಿ ಒಗ್ಗೂಡಿಸಿ ದೇಶ ರಚನೆ ಮಾಡಿದ್ದಲ್ಲದೇ, ಸಂವಿಧಾನದ ಸಂಕೀರ್ಣ ವ್ಯವಸ್ಥೆಯಡಿ ಸೌಹಾರ್ಧಯುತ ಬದುಕು ನಡೆಸುವಂತೆ ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಡಾ ಅಂಬೇಡ್ಕರ್ ಕಾರ್ಯ ಸ್ಮರಣೀಯ: ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ಗಣತಂತ್ರ ದೇಶವನ್ನಾಗಿಸಿ ಇಂದಿಗೆ 64 ವರ್ಷಗಳು ಸಂದಿದ್ದು, ವಿಶ್ವದ ಅತೀ ದೊಡ್ಡ ಪ್ರಜಾಸತ್ತಾತ್ಮಕ ಸಂವಿಧಾನ ರಚಿಸಿಕೊಟ್ಟ ಕೀರ್ತಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಜನಸಂಖ್ಯೆ ತೊಡಕು: ಅತಿಯಾದ ಜನಸಂಖ್ಯೆ, ಪ್ರಾಮಾಣಿಕರ ಕೊರತೆ, ನಿರುದ್ಯೋಗ, ಬಡತನ ಮುಂತಾದ ಹತ್ತು ಹಲವು ಸಮಸ್ಯೆ ಎದುರಿಸುತ್ತಿರುವ ದೇಶ, ಪ್ರಗತಿ ಪಥದತ್ತ ಸಾಗಲು ತೊಡಕಾಗುತ್ತಿವೆ ಎಂದು ವಿಷಾದಿಸಿದರು.
ಭದ್ರತೆ ಸವಾಲಾಗಲಿದೆ: ಇದಕ್ಕೂ ಮುನ್ನ ಗೌರವರಕ್ಷೆ ಸ್ವೀಕರಿಸಿ ಸಂದೇಶ ತಿಳಿಸಿದ ತಹಸೀಲ್ದಾರ್ ಎ.ಎ. ಗನಿ, ರಾಷ್ಟ್ರೀಯತೆ ಎಂಬುದು ಪ್ರತಿಯೊಬ್ಬರ ಅಭಿಮಾನದ ವಿಷಯ. ಶಾಂತಿ, ಸೌಹಾರ್ಧದೊಂದಿಗೆ ಐಕ್ಯತೆ ಸಾಧಿಸುವ ಮೂಲಕ ದೇಶದ ಭದ್ರತೆಗೆ ಪಣತೊಡಬೇಕಾದ ದಿನಗಳು ಸಮೀಪಿಸುತ್ತಿವೆ ಎಂದರು.
ಭಯೋತ್ಪಾದನೆ, ಭ್ರಷ್ಟಾಚಾರ, ನಿರುದ್ಯೋಗ ಇನ್ನಿತರ ಜ್ವಲಂತ ಸಮಸ್ಯೆ ನಿರ್ಮೂಲನೆಗೆ ಕೈಜೋಡಿಸಿ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಭಾರತವನ್ನು ಪ್ರಗತಿ ಪಥದಲ್ಲಿ ಸಾಗುವಂತೆ ಮಾಡಲು ಪಣ ತೊಡಬೇಕಾಗಿದೆ ಎಂದರು. ಪುರಸಭೆ ಅಧ್ಯಕ್ಷೆ ಪಾರ್ವತಿ ಕೊಪ್ಪದ, ಉಪಾಧ್ಯಕ್ಷ ಬಾಬು ಬಡಿಗೇರ, ತಾಪಂ ಅಧ್ಯಕ್ಷೆ ಚಿನ್ನವ್ವ ಪಾಸಿ ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುರೇಶ ಯತ್ನಳ್ಳಿ, ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಣಾಧಿಕಾರಿ ಸಿ. ಪ್ರಸನ್ನಕುಮಾರ್ ಸ್ವಾಗತಿಸಿದರು, ಬಿ.ಎಫ್. ದೊಡ್ಮನಿ ನಿರೂಪಿಸಿದರು. ಜಿ. ಸುಮಾ ವಂದಿಸಿದರು.