ಹೊಸರಿತ್ತಿ: 20 ಜೋಡಿ ನೂತನ ದಾಂಪತ್ಯಕ್ಕೆ
ಹಾವೇರಿ: ತಾಲೂಕಿನ ಹೊಸರಿತ್ತಿಯ ಗುದ್ದಲೀಶ್ವರ ಮಠದಲ್ಲಿ 113ನೇ ಜಾತ್ರೋತ್ಸವದ ಅಂಗವಾಗಿ ಸಾಮೂಹಿಕ ವಿವಾಹಗಳು ಜರುಗಿದವು.
ಹೊಸರಿತ್ತಿಯ ಗುದ್ಲೇಪ್ಪ ಹಳ್ಳಿಕೇರಿ ಕಾಲೇಜು ಮೈದಾನದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 20 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸಾನ್ನಿಧ್ಯ ವಹಿಸಿದ್ದ ಗುಡ್ಡದ ಆನ್ವೇರಿಯ ಶಿವಯೋಗೀ ಶ್ರೀಗಳು ಮಾತನಾಡಿ, ಮದುವೆ ಎನ್ನುವ ಬಂಧನ ಅರ್ಥಪೂರ್ಣವಾದುದು. ಸತಿ-ಪತಿಗಳಾದವರು ಮದುವೆ ಎನ್ನುವ ಅರ್ಥವನ್ನು ಸರಿಯಾಗಿ ಅರ್ಥೈಸಿಕೊಂಡು ದಾಂಪತ್ಯ ಜೀವನ ನಡೆಸಬೇಕು. ಜಂಜಡದ ಬದುಕಿನಲ್ಲಿ ಸುಖ, ನೆಮ್ಮದಿ ಬದುಕು ಸಾಗಿಸುವಂತೆ ಸಲಹೆ ಮಾಡಿದರು.
ಗುದ್ದಲೀಶ್ವರ ಮಠದ ಪೀಠಾಧಿಪತಿ ಗುದ್ದಲೀಶ್ವರ ಶ್ರೀಗಳು ಮಾತನಾಡಿ, ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಮದುವೆ ಅರ್ಥವನ್ನು ಕಳೆದುಕೊಳ್ಳುತ್ತ ಬಂದಿದೆ. ಸಾಮೂಹಿಕ ವಿವಾಹಗಳು ಪರಿಪೂರ್ಣ ಅರ್ಥ ನೀಡುತ್ತ ಬಂದಿವೆ. ಶ್ರೀಮಠ ಅನೇಕ ವರ್ಷಗಳಿಂದ ಸಹಸ್ರಾರು ಭಕ್ತರ ಸಹಯೋಗದೊಂದಿಗೆ ಜಾತ್ರಾ ನಿಮಿತ್ತ ಸಾಮೂಹಿಕ ವಿವಾಹಗಳನ್ನು ಉಚಿತವಾಗಿ ನಡೆಸಿಕೊಂಡು ಬಂದಿದೆ ಎಂದರು. ಈ ಸಂದರ್ಭ ಹೊಸರಿತ್ತಿಯ ಐ.ಜಿ. ಕೋರಿ, ಸಿದ್ಧರಾಜ ಕಲಕೋಟಿ, ಅರುಣಕುಮಾರ ಶೆಟ್ಟರ್, ಸಿದ್ದಣ್ಣ ಹಳ್ಳಕೇರಿ, ಚನ್ನವೀರಯ್ಯ ಹಾವೇರಿಮಠ, ಕೊಟ್ರಪ್ಪ ಗಾಣಿಗೇರ, ಗೀರೀಶ ಅಂಕಲಕೋಟಿ, ಬಸವರಾಜ ಶಿರಬಡಗಿ, ಮಾಂತೇಶ ಇಟಗಿ, ಇನ್ನಿತರರಿದ್ದರು.