ಇಂದು ಶುದ್ಧ ನೀರಿನ ಘಟಕ ಉದ್ಘಾಟನೆ
ಶಿಗ್ಗಾಂವಿ: ಶಿಗ್ಗಾಂವಿ, ಬಂಕಾಪುರ, ಸವಣೂರು ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ ಜ. 28ರಂದು ನಡೆಯಲಿದೆ ಎಂದು ಘಟಕಗಳ ನಿರ್ಮಾತೃ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ತಿಳಿಸಿದೆ. ಬಂಕಾಪುರದ ಅರಳೆಲೆ ಹಿರೇಮಠದ ಆವರಣದಲ್ಲಿ ಬೆಳಗ್ಗೆ 11ಕ್ಕೆ ಪುರಸಭಾಧ್ಯಕ್ಷ ರಾಮಣ್ಣಾ ರಾಣೋಜಿ ಉದ್ಘಾಟಿಸುವರು. ಸವಣೂರು ತಹಸೀಲ್ದಾರ ಕಚೇರಿ ಆವರಣದಲ್ಲಿ ಮಧ್ಯಾಹ್ನ 1ಕ್ಕೆ ಪುರಸಭಾಧ್ಯಕ್ಷ ಶಂಕರಗೌಡ ದೊಡ್ಡಮನಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸುವರು. ಶಿಗ್ಗಾಂವಿ ಪುರಸಭೆ ಆವರಣದ ಸಂಜೆ 4ಕ್ಕೆ ಪುರಸಭಾಧ್ಯಕ್ಷ ರಾಮು ಪೂಜಾರ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.
ಬೋಸ್ ಜಯಂತಿ
ಶಿಗ್ಗಾಂವಿ: ಅನೇಕರ ತ್ಯಾಗ, ಬಲಿದಾನದ ಫಲವಾಗಿ ಇಂದು ಸ್ವಾತಂತ್ರವನ್ನು ಅನುಭವಿಸಲು ಸಾಧ್ಯವಾಗಿದೆ ಎಂದು ಪ್ರಾಚಾರ್ಯ ಎಂ.ಎನ್. ಮಲ್ಲಾಡದ ಹೇಳಿದರು. ತಾಲೂಕಿನ ಬಂಕಾಪುರದ ಕರ್ನಾಟಕ ಕೀರ್ತಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಸುಭಾಶ್ಚಂದ್ರ ಬೋಸ್ರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಂ.ಬಿ. ಉಂಕಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್. ದುಂಡಪ್ಪನವರ, ಎಸ್.ಬಿ. ಕುರಬರ, ಎಸ್.ಆರ್. ಕಾರಗಿ, ಎಂ.ಎಸ್. ಕನ್ನಕ್ಕನವರ, ಜಗದೀಶ ಪುರದ, ಎಂ.ಆರ್. ಅಶೋಕ ಇದ್ದರು. ಲಕ್ಷ್ಮೀ ಜಾಡಗೋಪ್ಪದ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಿ.ಎಫ್. ಹಿರಗಪ್ಪನವರ ಸ್ವಾಗತಿಸಿದರು. ಎಂ.ವಿ. ಗಾಡದ ನಿರ್ವಹಿಸಿದರು. ಗುರುಸ್ವಾಮಿ ಕೆಂಡದಮಠ ವಂದಿಸಿದರು.
ಇಂದು ಪ್ರತಿಭಟನೆ
ಹಿರೇಕೆರೂರು: ತುಂಗಾ ಮೇಲ್ದಂಡೆ ಉಪ ಕಾಲುವೆಗಳ ಕಾಮಗಾರಿ ಪೂರ್ಣಗೊಳಿಸಬೇಕು. ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕವಾಗಿ ಪರಿಹಾರ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ (ಪ್ರೊ ನಂಜುಂಡಸ್ವಾಮಿ ಬಣ) ಜ. 28ರಂದು ತಾಲೂಕಿನ ರಟ್ಟಿಹಳ್ಳಿ ಉಪತಹಸೀಲ್ದಾರ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದೆ. ಮಹಾಲಕ್ಷ್ಮೀ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳುವುದು ಎಂದು ತಾಲೂಕಾಧ್ಯಕ್ಷ ರಾಜಶೇಖರ ದೂದಿಹಳ್ಳಿ ತಿಳಿಸಿದ್ದಾರೆ.
ಹಾವೇರಿ: ನಗರದ ಗುರುಶಾಂತಯ್ಯ ಹಿರೇಮಠ (ಡಂಬಳ ಶಾಸ್ತ್ರೀ) ಅವರ ತಾಯಿ ಅನ್ನಪೂರ್ಣಮ್ಮ ಹಾಲಯ್ಯ ಹಿರೇಮಠ (82) ಭಾನುವಾರ ನಿಧನರಾದರು. ಅವರಿಗೆ ಮೂವರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.