ಯುವಶಕ್ತಿ ಸದ್ಬಳಕೆಯಾದರೆ ದೇಶಾಭಿವೃದ್ಧಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 27
ದೇಶದ ಆಸ್ತಿಯಾದ ಯುವಶಕ್ತಿ ಸದ್ಬಳಕೆಯಾದಲ್ಲಿ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಜಿಪಂ ಅಧ್ಯಕ್ಷ ಶಂಕ್ರಪ್ಪ ಮಾತನವರ ಹೇಳಿದರು.
ಕದರಮಂಡಲಗಿ ಗ್ರಾಮದ ಕಾಂತೇಶ ದೇವಸ್ಥಾನ ಸಮುದಾಯ ಭವನದಲ್ಲಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಏರ್ಪಡಿಸಿದ್ದ ತಾಲೂಕು ಮಟ್ಟದ ಯುವಜನ ಮೇಳ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಪರಿಚಯಿಸುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ, ಆಸಕ್ತಿಯಿರುವ ಯುವಕರನ್ನು ಜಾನಪದ ತಳಹದಿಯಲ್ಲಿ ಪ್ರೋತ್ಸಾಹಿಸುವ ಗುರಿಯನ್ನು ಯುವಜನ ಸೇವಾ ಇಲಾಖೆ ಹೊಂದಿದ್ದು ಜನಪದ ಕಲೆಗಳನ್ನು ಜೀವಂತವಾಗಿಡುವಲ್ಲಿ ಕಲಾವಿದರು ಶ್ರಮಿಸುತ್ತಿದ್ದಾರೆ, ಆದರೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕಿದೆ ಎಂದರು.
ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಟೀವಿ ಪ್ರಭಾವದಿಂದ ಯುವಕರು ಜಾನಪದ ಕಲೆಗಳನ್ನು ಮುಂದುವರಿಸಿಕೊಂಡು ಹೋಗುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ ಎಂದು ವಿಷಾದಿಸಿದರು.
ಬೆರಳೆಣಿಕೆಯಷ್ಟು ಯುವಕ ಮಂಡಲಗಳು ಹಾಗೂ ಕೇವಲ ನಾಲ್ವರು ಕಲಾವಿದರು ಯುವಜನ ಮೇಳದಲ್ಲಿ ಪಾಲ್ಗೊಂಡಿದ್ದರು. ಯುವಜನ ಮೇಳದ ಮುನ್ನಾ ದಿನ ಅಧಿಕಾರಿಗಳು ನಡೆಸಿದ ಪೂರ್ವಭಾವಿ ಸಭೆಗೂ ಸೂಕ್ತ ಪ್ರಚಾರ ಸಿಗದ ಹಿನ್ನೆಲೆಯಲ್ಲಿ ಮೇಳಕ್ಕೆ ಸಕಾರಾತ್ಮಕ ಸ್ಪಂದನ ಸಿಕ್ಕಿಲ್ಲ ಎಂಬ ಆರೋಪಗಳು ಸಭಿಕರಿಂದ ಕೇಳಿ ಬಂದವು.
ಗ್ರಾಪಂ ಅಧ್ಯಕ್ಷೆ ಕಮಲಾ ಹಮ್ಮಗಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಸಣ್ಣಲಿಂಗಪ್ಪ ಹೂಲಿಹಳ್ಳಿ, ತಾಪಂ ಸದಸ್ಯ ಮಲ್ಲಿಕಾರ್ಜುನ ಕರಿಲಿಂಗಪ್ಪನವರ, ಟಿಇಓ ಕೃಷ್ಣಮೂರ್ತಿ, ಕಾಂತೇಶ ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಕುಡುಪಲಿ, ತಾಲೂಕು ಒಕ್ಕೂಟದ ಅಧ್ಯಕ್ಷ ಶಂಕ್ರಪ್ಪ ಅಕ್ಕಿ, ಕಾರ್ಯದರ್ಶಿ ವಿ.ಕೆ. ಪಾಟೀಲ, ಶಾರದಾ ಯುವಕ ಮಂಡಳ ಅಧ್ಯಕ್ಷೆ ಗೌರಮ್ಮ ಬಾಸೂರ ಇದ್ದರು. ಸಹಾಯಕ ಯುವಜನ ಅಧಿಕಾರಿ ಆರ್.ಎಂ.ಪಾಟೀಲ ಸ್ವಾಗತಿಸಿದರು, ಸಾಕ್ಷರತಾ ಸಂಯೋಜಕಿ ನಾಗರತ್ನಾ ಹುಲ್ಲತ್ತಿ ನಿರೂಪಿಸಿದರು.