ರಸಗೊಬ್ಬರ ನಿಲ್ಲಿಸದಿದ್ದರೆ ಆಹಾರ ಕ್ಷಾಮ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 27
ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕುಲಾಂತರಿ ಬೀಜಗಳ ಬಳಕೆಗೆ ಕಡಿವಾಣ ಹಾಕದಿದ್ದಲ್ಲಿ ದೇಶ ಆಹಾರ ಕ್ಷಾಮ ಎದುರಿಸಲು ಸಜ್ಜಾಗಬೇಕಾಗುತ್ತದೆ ಎಂದು ಕೃಷಿ ಪಂಡಿತ ಪುರಸ್ಕೃತ ಚನ್ನಬಸಪ್ಪ ಕೊಂಬಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ದೇಶಿಯ ಬೀಜ ಮಾರಾಟ ಮಳಿಗೆ ಆವರಣದಲ್ಲಿ ಸಾವಯುವ ಕೃಷಿಕರಿಗೆ ಏರ್ಪಡಿಸಿದ ಸಿರಿಧಾನ್ಯ ಉತ್ಪಾದನೆ ಹಾಗೂ ಬಳಕೆಯ ಮಹತ್ವ ಕುರಿತು ಮಾಹಿತಿ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು. ಹಸಿರು ಕ್ರಾಂತಿಯ ಪರಿಣಾಮ ದೇಶದ ರೈತರು ಅನಿವಾರ್ಯವಾಗಿ ಹೈಬ್ರೀಡ್ಬೀಜ ಹಾಗೂ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕಾಯಿತು. ಅಲ್ಪತೃಪ್ತನಾದ ಕೃಷಿಕ ಅವುಗಳಿಗೆ ಸ್ವಾಗತ ಮಾಡಿದ್ದು ಸತ್ಯ, ಆದರೆ ಕೆಲವೇ ವರ್ಷದಲ್ಲಿ ಮಣ್ಣಿನ ಸತ್ವ ಕಳೆದು ಹೋಗಿದ್ದು, ಅದೇ ರೈತ ಇಂದು ಪರಿತಪಿಸುತ್ತಿದ್ದಾನೆ ಎಂದರು.
ಕುಲಾಂತರಿ ಬೀಜ ಬೇಡ
ಕುಲಾಂತರಿ ಬೀಜ ಹಾಗೂ ರಾಸಾಯನಿಕ ಗೊಬ್ಬರ ಬಳಕೆಯಿಂದ ಎಂದಿನ ಇಳುವರಿ ಕಂಡುಕೊಳ್ಳಲಾಗದೇ ಕೃಷಿಕ ಸಾಲದ ಶೂಲಕ್ಕೆ ಸಿಲುಕಿದ್ದಾನೆ. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ಹಿನ್ನೆಲೆಯಲ್ಲಿ ಕೃಷಿಭೂಮಿ ಬಂಜರಾಗುತ್ತಿದ್ದು, ಇವುಗಳಿಂದ ಹರಿದ ನೀರು ನದಿಗಳಿಗೆ ಸೇರಿ ವಿಷಯುಕ್ತವಾಗುತ್ತಿದೆ ಎಂದರು.
20 ವರ್ಷದಲ್ಲಿ ಕೃಷಿ ಸ್ಥಗಿತ
ಸಾವಯವ ಗೊಬ್ಬರ ಹಾಗೂ ದೇಶೀಯ ಬೀಜಬಳಕೆ ಮಾಡುವ ಮೂಲಕ ಪಾರಂಪರಿಕ ಪದ್ಧತಿಯಲ್ಲಿ ಕೃಷಿ ನಡೆಸಿದಾಗ ಮಾತ್ರ ಕೃಷಿ ಮುಂದುವರಿಯಲು ಸಾಧ್ಯ. ಇಲ್ಲದಿದ್ದಲ್ಲಿ ಬರುವ 20 ವರ್ಷದಲ್ಲಿ ದೇಶದಲ್ಲಿ ಕೃಷಿ ಸ್ಥಗಿತಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿಗೆ ಉತ್ತೇಜನ ನೀಡುವ ಭರದಲ್ಲಿ ಸರ್ಕಾರಗಳು ಸಾಲಮನ್ನಾ ಮಾಡುವ ಮೂಲಕ ಸಾಧನೆಯೆಂಬಂತೆ ಬೀಗುವುದನ್ನು ಸ್ಥಗಿತಗೊಳಿಸಬೇಕು, ಇದರಿಂದ ಕೆಲ ರೈತರು ಮಾತ್ರ ತೃಪ್ತರಾಗಬಹುದೇ ವಿನಃ ಅಂತಿಮ ಪರಿಹಾರವಾಗಲು ಸಾಧ್ಯವಿಲ್ಲ ತಪ್ಪು ಕೃಷಿ ನೀತಿಯಿಂದ ರೈತ ಶ್ರಮಪಟ್ಟರೂ ಸಹ ಲಾಭದಾಯಕ ಎನಿಸುತ್ತಿಲ್ಲ. ಹೀಗಾಗಿ ದೇಶದ ರೈತರು ಕೃಷಿಯಿಂದ ವಿಮುಖವಾಗುತ್ತಿದ್ದಾರೆ ಎಂದರು.
ಅಲ್ಪ ವೆಚ್ಚದಲ್ಲಿ ಬೆಳೆಯುವಂತಹ ಸಿರಿಧಾನ್ಯವನ್ನು ರೈತರು ಬೆಳೆಯಲು ಮುಂದಾಗಬೇಕು. ಇದರಿಂದ ಉತ್ತಮ ಇಳುವರಿ ಸಿಗಲಿದೆಯಲ್ಲದೇ, ದೇಶದ ಆಹಾರ ಸಮಸ್ಯೆಯೂ ಸಹ ನೀಗಲಿದೆ. ಬೀಜಗಳಿಗಾಗಿ ಸಾವಿರಾರು ರು. ಹಣ ವ್ಯಯಿಸದೇ ದೇಶೀಯ ತಳಿ ಬೀಜಗಳನ್ನು ಬಳಕೆ ಮಾಡುವಂತೆ ಸಲಹೆ ನೀಡಿದರು.
ಕೃಷಿ ತರಬೇತಿ ಕೇಂದ್ರದ ನಿರ್ದೇಶಕಿ ಆರ್.ದೇವಿಕಾ ಮಾತನಾಡಿ, ಸಿರಿಧಾನ್ಯ ಬೆಳೆಗೆ ಕೇಂದ್ರ ಕೃಷಿ ಇಲಾಖೆ ಪ್ರೋತ್ಸಾಹ ನೀಡುತ್ತಿದೆ. ಅಗತ್ಯ ತರಬೇತಿ ಹಾಗೂ ವಿವಿಧೆಡೆ ಪ್ರವಾಸ ಕೈಗೊಳ್ಳುವ ಮೂಲಕ ಪ್ರಾಯೋಗಿಕ ಅನುಭವ ನೀಡಲಾಗುವುದು. ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಜಿ.ಪಿ. ಪಾಟೀಲ, ಶರಣಯ್ಯ ಶ್ಯಾಮನೂರ, ನಂದೀಶ ನೆಲ್ಲಿಕೊಪ್ಪ, ಗಣೇಶ ಪೂಜಾರ, ಹನುಮಗೌಡ ಶಿಡ್ರಳ್ಳಿ, ಶಿವಣ್ಣ ಭರಮಗೌಡ್ರ, ಉಜನೇಶ ಬೆನ್ನೂರ, ಮಾರುತಿ ಪಾಟೀಲ ಉಪಸ್ಥಿತರಿದ್ದರು.