ಅನಾಥವಾಗುತ್ತಿರುವ ದೇಶಿ ಕಲೆ: ವೀರಣ್ಣ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 28
ತೊಗಲುಗೊಂಬೆಯಾಟ ಹಾಗೂ ಸೂತ್ರದಗೊಂಬೆಯಾಟ ಪ್ರದರ್ಶನ ಕಾಣದೇ ತೀವ್ರ ಅಳಿವಿನಂಚಿನಲ್ಲಿವೆ. ಈ ಕಲೆಗಳ ಬೆಳವಣಿಗೆ ಕುರಿತಂತೆ ಜಾನಪದ ಅಧ್ಯಯನ ವಿಭಾಗ, ಜಾನಪದ ವಿವಿ ಹಾಗೂ ಯಕ್ಷಗಾನ ವಿವಿಗಳು ಜವಾಬ್ದಾರಿ ತೋರದೇ ಒಂದು ಇನ್ನೊಂದರತ್ತ ಬೆರಳು ತೋರಿ ನಮ್ಮ ನೆಲದಲ್ಲೇ ನಮ್ಮ ಕಲೆಗಳು ಅನಾಥವಾಗುತ್ತಿವೆ ಎಂದು ಕೇಂದ್ರ ಸಂಗೀತ ನಾಟಕ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಬೆಳಗಲ್ಲು ವೀರಣ್ಣ ವಿಷಾಧ ವ್ಯಕ್ತಪಡಿಸಿದರು.
ಶಿಗ್ಗಾಂವಿಯ ಗೊಟಗೋಡಿಯ ರಾಕ್ ಗಾರ್ಡನ್ನಲ್ಲಿ ಕರ್ನಾಟಕ ವಿವಿ ಜಾನಪದ ಅಧ್ಯಯನ ವಿಭಾಗ, ಕರ್ನಾಟಕ ಜಾನಪದ ವಿವಿ, ದಾಸನೂರ ಸಮೂಹ ಸಂಸ್ಥೆಗಳು ಆಯೋಜಿಸಿದ್ದ 39ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ವಹಿಸಿಕೊಂಡು ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಯೊಂದು ಮಹಾನ್ವೃಕ್ಷ. ಅದಕ್ಕೆ ನಮ್ಮ ಹಳ್ಳಿಗಳೇ ಬೇರುಗಳು. ಜಾನಪದ ಸಂಸ್ಕೃತಿಯ ತವರಾಗಿರುವ ಹಳ್ಳಿಗಳಿಂದು ತೀವ್ರ ನಿರ್ಲಕ್ಷ್ಯಕ್ಕೊಳಗಾಗುತ್ತಿವೆ. ಈ ಗ್ರಾಮಗಳಲ್ಲಿರುವ ಅಳಿವಿನಂಚಿನ ಕಲೆಗಳನ್ನು ಪೋಷಿಸಿ ಬೆಳೆಸಬೇಕಾದ ಕರ್ತವ್ಯ ವಿವಿ ಹಾಗೂ ನಮ್ಮ-ನಿಮ್ಮೆಲ್ಲರಿಂದ ಆಗಬೇಕಿದೆ. ಗ್ರಾಮೀಣ ಮಟ್ಟದಲ್ಲಿರುವ ಪ್ರಬುದ್ಧ, ಬುದ್ದಿಜೀವಿ ಕಲಾವಿದ ಬಡವನಾಗಿದ್ದಾನೆ. ಆತನಿಗೆ ಅಕ್ಷರಜ್ಞಾನವಿಲ್ಲ. ಅಸಂಘಟಿತನಾಗಿ ತನ್ನ ಬದುಕಿನೊಂದಿಗೆ ಕಲೆಯನ್ನೂ ಅಷ್ಟೇ ಜೋಪಾನವಾಗಿ ಕಾಯ್ದುಕೊಂಡು ಬರುತ್ತಿದ್ದಾನೆ. ಅವನಿಗೆ ಪ್ರೋತ್ಸಾಹ, ಬೆಂಬಲ ಹಾಗೂ ವೇದಿಕೆ ಬೇಕಿದೆ ಎಂದರು.
ಜಾನಪದ ಸಮ್ಮೇಳನಕ್ಕೆ ಮದ್ದಳೆ ಬಾರಿಸುವ ಮೂಲಕ ಚಾಲನೆ ನೀಡಿದ ಕವಿವಿ ಮೌಲ್ಯಮಾಪನ ವಿಭಾಗದ ಮುಖ್ಯಸ್ಥ ದುರ್ಗಾದಾಸ ಮಾತನಾಡಿ, ಜನಪದ ಹಾಗೂ ಜಾನಪದಗಳನ್ನು ಸಂಶಯದಿಂದ ನೋಡುವ ದಿನಗಳಲ್ಲಿ ಅವುಗಳ ಕುರಿತಂತೆ ಸಂಶೋಧನೆ ಆರಂಭಿಸಿದ ಕೀರ್ತಿ ಕರ್ನಾಟಕ ವಿವಿಗೆ ಸಲ್ಲುತ್ತದೆ. ಪ್ರಸ್ತುತ ಸಮ್ಮೇಳನದ ವಿಷಯವಾಗಿ ಆಯ್ಕೆ ಮಾಡಿಕೊಂಡಿರುವ ನಮ್ಮ ಹಳ್ಳಿಗಳು ತುಂಬ ಪ್ರಸ್ತುತವಾಗಿದ್ದು, ಇಂದಿನ ಸ್ಥಿತ್ಯಂತರಕ್ಕೆ ಸಕಾರಣ ಹಾಗೂ ಜವಾಬು ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ. ಜಾನಪದ ವಿಷಯದ ಮೇಲೆ ಚರ್ಚೆ, ಪ್ರಾಯೋಗಿಕತೆಗಳಿಗೆ ಹೆಚ್ಚು ಒತ್ತು ನೀಡಿದ ಕವಿವಿಯ ಕಾರ್ಯ ಅತ್ಯಂತ ಶ್ಲಾಘನೀಯವೂ ಆಗಿದೆ. ಇಂದು ನಗರಗಳ ಬದುಕನ್ನು ಗ್ರಾಮಗಳು ಅನುಕರಣೆ ಮಾಡುತ್ತಿರುವುದು, ಪಾರಂಪರಿಕ ಕೃಷಿ ಅವನತಿಯತ್ತ ಸಾಗುತ್ತಿರುವುದು ವಿಷಾದನೀಯ ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಜಾನಪದ ತಜ್ಞ ಡಾ. ಬಸವರಾಜ ಮಲಶೆಟ್ಟಿ ಮಾತನಾಡಿ, ಹಳ್ಳಿಯ ಬದುಕಿನ ನೆನಪುಗಳು ಸಿಹಿಯಾದವುಗಳು. ಅವುಗಳನ್ನು ಕೇವಲ ನೆನೆದರೇ ಮನಸ್ಸು ಉಲ್ಲಸಿತವಾಗುತ್ತದೆ, ಪ್ರಫುಲ್ಲವಾಗುತ್ತದೆ. ಆ ನೆನಪುಗಳು ನೀಡುವ ಖುಷಿಗೆ ಸರಿಸಾಟಿ ಯಾವುದೂ ಇಲ್ಲ. ಹಳ್ಳಿಗಳ ಜೀವನ ಸ್ವಾವಲಂಭನೆಯಿಂದ ಕೂಡಿದ್ದು, ನಮಗೆ ಸ್ವಾತಂತ್ರ್ಯ ಬಂದಿನಿಂದಲೇ ನಾವು ಪರವಲಂಬಿಗಳಾಗಿಬಿಟ್ಟೆವು ಎಂದರು.
ಇಂದು ವಿದ್ಯುತ್ ಇಲ್ಲದೇ ಹೋದಲ್ಲಿ ನಮ್ಮ ಜೀವನ ಬರಡು. ನೀರಿಲ್ಲ, ಗಿರಣಿ ಇಲ್ಲ, ಮಿಕ್ಸಿ ಇಲ್ಲ. ಇವಿಲ್ಲದ ಮೇಲೆ ಬದುಕೆಲ್ಲಿ ಎಂದು ನುಡಿದರು.
ಅಂದಿನ ಗ್ರಾಮೀಣ ಬದುಕು ಪ್ರಚೋದನಕಾರಿಯಾಗಿರಲಿಲ್ಲ, ಮೌಲ್ಯಗಳಿದ್ದವು, ಮೈಗಳ್ಳತನವಿರಲಿಲ್ಲ. ಎಲ್ಲರೂ ಕೃಷಿಯಲ್ಲಿ ನಿರತರಾಗಿದ್ದರು. ಕೇವಲ 2 ದಶಕಗಳಲ್ಲಿ ತೀವ್ರತಮವಾಗಿ ಬದಲಾದ ಜಗತ್ತು ಸಂಕ್ರಮಣ ಕಾಲದೊಂದಿಗೆ ಬದಲಾಗಿದೆ ಇದನ್ನೇ ಜಾಗತೀಕರಣ ಎಂದರೆ ತಪ್ಪಾಗಲಾರದು ಎಂದರು.
ಕರ್ನಾಟಕ ಜಾನಪದ ವಿವಿ ಕುಲಪತಿ ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಿದ್ದರು. ಕವಿವಿ ಜಾನಪದ ಅಧ್ಯಯನ ವಿಭಾಗದ ಅಧ್ಯಕ್ಷೆ ಶಾಲಿನಿ ರಘುನಾಥ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ ಮಾತನಾಡಿದರು. ಜಾನಪದ ಅಕಾಡೆಮಿ ಅಧ್ಯಕ್ಷ ಗೋ.ರು. ಚನ್ನಬಸಪ್ಪ, ಸಂಘಟಕರಾದ ವೇದಾರಾಣಿ, ಪ್ರಕಾಶ ದಾಸನೂರ, ಪ್ರೊ.ಶ್ರೀಶೈಲ ಹುದ್ದಾರ, ಪ್ರೊ.ಎಲ್ವಿ. ಪಾಟೀಲ ಇದ್ದರು. ನಾಗರಾಜ ಮತ್ತು ವಿಜಯಲಕ್ಷ್ಮೀ ನಿರ್ವಹಿಸಿದರು.