ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅನಾಥವಾಗುತ್ತಿರುವ ದೇಶಿ ಕಲೆ: ವೀರಣ್ಣ

Rashmi Kasaragodu
Updated On : 29 Jan 2013, 1:27 am




ಹಾವೇರಿ: ತೊಗಲುಗೊಂಬೆಯಾಟ, ಸೂತ್ರದಗೊಂಬೆಯಾಟ ಪ್ರದರ್ಶನ ಕಾಣದೆ ಅಳಿವಿನಂಚಿನಲ್ಲಿವೆ. ಈ ಕಲೆಗಳ ಬೆಳವಣಿಗೆ ಕುರಿತಂತೆ ಜಾನಪದ ಅಧ್ಯಯನ ವಿಭಾಗ, ಜಾನಪದ ವಿವಿ, ಯಕ್ಷಗಾನ ವಿವಿಗಳು ಜವಾಬ್ದಾರಿ ತೋರದೆ ಒಂದು ಇನ್ನೊಂದರತ್ತ ಬೆರಳು ತೋರಿ ನಮ್ಮ ನೆಲದಲ್ಲೇ ನಮ್ಮ ಕಲೆಗಳು ಅನಾಥವಾಗುತ್ತಿವೆ ಎಂದು ಕೇಂದ್ರ ಸಂಗೀತ ನಾಟಕ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಬೆಳಗಲ್ಲು ವೀರಣ್ಣ ವಿಷಾದ ವ್ಯಕ್ತಪಡಿಸಿದರು.
ಶಿಗ್ಗಾಂವಿಯ ಗೊಟಗೋಡಿಯ ರಾಕ್ ಗಾರ್ಡನ್‌ನಲ್ಲಿ ಕರ್ನಾಟಕ ವಿವಿ ಜಾನಪದ ಅಧ್ಯಯನ ವಿಭಾಗ, ಕರ್ನಾಟಕ ಜಾನಪದ ವಿವಿ, ದಾಸನೂರ ಸಮೂಹ ಸಂಸ್ಥೆಗಳು ಆಯೋಜಿಸಿದ್ದ 39ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ವಹಿಸಿಕೊಂಡು ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಯೊಂದು ಮಹಾನ್ ವೃಕ್ಷ. ಅದಕ್ಕೆ ನಮ್ಮ ಹಳ್ಳಿಗಳೇ ಬೇರುಗಳು. ಜಾನಪದ ಸಂಸ್ಕೃತಿಯ ತವರಾಗಿರುವ ಹಳ್ಳಿಗಳಿಂದು ನಿರ್ಲಕ್ಷ್ಯಕ್ಕೊಳಗಾಗುತ್ತಿವೆ. ಈ ಗ್ರಾಮಗಳಲ್ಲಿ ಅಳಿವಿನಂಚಿನ ಕಲೆಗಳನ್ನು ಪೋಷಿಸಿ ಬೆಳೆಸಬೇಕಾದ ಕರ್ತವ್ಯ ವಿವಿ, ನಮ್ಮ-ನಿಮ್ಮೆಲ್ಲರಿಂದ ಆಗಬೇಕಿದೆ. ಗ್ರಾಮೀಣ ಮಟ್ಟದಲ್ಲಿರುವ ಪ್ರಬುದ್ಧ, ಬುದ್ಧಿ ಜೀವಿ ಕಲಾವಿದ ಬಡವನಾಗಿದ್ದಾನೆ. ಆತನಿಗೆ ಅಕ್ಷರಜ್ಞಾನವಿಲ್ಲ. ಅಸಂಘಟಿತನಾಗಿ ತನ್ನ ಬದುಕಿನೊಂದಿಗೆ ಕಲೆಯನ್ನೂ ಅಷ್ಟೇ ಜೋಪಾನವಾಗಿ ಕಾಪಾಡುತ್ತಿದ್ದಾನೆ. ಅವನಿಗೆ ಪ್ರೋತ್ಸಾಹ, ಬೆಂಬಲ ಹಾಗೂ ವೇದಿಕೆ ಬೇಕಿದೆ ಎಂದರು.
ಜಾನಪದ ಸಮ್ಮೇಳನಕ್ಕೆ ಮದ್ದಳೆ ಬಾರಿಸಿ ಚಾಲನೆ ನೀಡಿದ ಕವಿವಿ ಮೌಲ್ಯಮಾಪನ ವಿಭಾಗದ ಮುಖ್ಯಸ್ಥ ಡಾ೤ ಕೆ.ಆರ್. ದುರ್ಗಾದಾಸ ಮಾತನಾಡಿ, ಜನಪದ, ಜಾನಪದಗಳನ್ನು ಸಂಶಯದಿಂದ ನೋಡುವ ದಿನಗಳಲ್ಲಿ ಅವುಗಳ ಬಗ್ಗೆ ಸಂಶೋಧನೆ ಆರಂಭಿಸಿದ ಕೀರ್ತಿ ಕರ್ನಾಟಕ ವಿವಿಗೆ ಸಲ್ಲುತ್ತದೆ. ಪ್ರಸ್ತುತ ಸಮ್ಮೇಳನದ ವಿಷಯವಾಗಿ ಆಯ್ಕೆ ಮಾಡಿಕೊಂಡಿರುವ ನಮ್ಮ ಹಳ್ಳಿಗಳು ತುಂಬ ಪ್ರಸ್ತುತ. ಇಂದಿನ ಸ್ಥಿತ್ಯಂತರಕ್ಕೆ ಸಕಾರಣ, ಜವಾಬು ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ. ಜಾನಪದ ವಿಷಯದ ಮೇಲೆ ಚರ್ಚೆ, ಪ್ರಾಯೋಗಿಕತೆಗಳಿಗೆ ಒತ್ತು ನೀಡಿದ ಕವಿವಿ ಕಾರ್ಯ ಶ್ಲಾಘನೀಯ. ಇಂದು ನಗರಗಳ ಬದುಕನ್ನು ಗ್ರಾಮಗಳು ಅನುಕರಣೆ ಮಾಡುತ್ತಿರುವುದು, ಪಾರಂಪರಿಕ ಕೃಷಿ ಅವನತಿಯತ್ತ ಸಾಗುತ್ತಿರುವುದು ವಿಷಾದನೀಯ ಎಂದರು.
ಜಾನಪದ ತಜ್ಞ ಡಾ. ಬಸವರಾಜ ಮಲಶೆಟ್ಟಿ ಮಾತನಾಡಿ, ಹಳ್ಳಿ ಜೀವನ ಸ್ವಾವಲಂಬನೆಯಿಂದ ಕೂಡಿದ್ದು, ಸ್ವಾತಂತ್ರ್ಯ ಬಂದಿನಿಂದಲೇ ನಾವು ಪರವಲಂಬಿಗಳಾದೆವು. ಇಂದು ವಿದ್ಯುತ್ ಇಲ್ಲದಿದ್ದರೆ ಜೀವನ ಬರಡು. ನೀರಿಲ್ಲ, ಗಿರಣಿ ಇಲ್ಲ, ಮಿಕ್ಸಿ ಇಲ್ಲ. ಇವಿಲ್ಲದ ಮೇಲೆ ಬದುಕೆಲ್ಲಿ? ಅಂದಿನ ಗ್ರಾಮೀಣ ಬದುಕು ಪ್ರಚೋದನಕಾರಿಯಾಗಿರಲಿಲ್ಲ, ಮೌಲ್ಯಗಳಿದ್ದವು, ಮೈಗಳ್ಳತನವಿರಲಿಲ್ಲ. ಎಲ್ಲರೂ ಕೃಷಿಯಲ್ಲಿ ನಿರತರಾಗಿದ್ದರು. ಕೇವಲ 2 ದಶಕಗಳಲ್ಲಿ ತೀವ್ರತಮವಾಗಿ ಬದಲಾದ ಜಗತ್ತು ಸಂಕ್ರಮಣ ಕಾಲದೊಂದಿಗೆ ಬದಲಾಗಿದೆ. ಇದನ್ನೇ ಜಾಗತೀಕರಣ ಎಂದರೆ ತಪ್ಪಾಗಲಾರದು ಎಂದರು.
ಕರ್ನಾಟಕ ಜಾನಪದ ವಿವಿ ಕುಲಪತಿ ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಿದ್ದರು. ಕವಿವಿ ಜಾನಪದ ಅಧ್ಯಯನ ವಿಭಾಗದ ಅಧ್ಯಕ್ಷೆ ಶಾಲಿನಿ ರಘುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ ಮಾತನಾಡಿದರು. ಜಾನಪದ ಅಕಾಡೆಮಿ ಅಧ್ಯಕ್ಷ ಗೋ.ರು. ಚನ್ನಬಸಪ್ಪ, ಸಂಘಟಕರಾದ ವೇದಾರಾಣಿ, ಪ್ರಕಾಶ ದಾಸನೂರ, ಪ್ರೊ.ಶ್ರೀಶೈಲ ಹುದ್ದಾರ, ಪ್ರೊ.ಎಲ್‌ವಿ. ಪಾಟೀಲ ಇದ್ದರು. ನಾಗರಾಜ, ವಿಜಯಲಕ್ಷ್ಮೀ ನಿರ್ವಹಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement