ಕಾರ್ಮಿಕರಿಗೆ ಸೌಲಭ್ಯ ವಿಳಂಬ: ಫೆ. 1ರಂದು ಪ್ರತಿಭಟನೆ ನಿರ್ಧಾರ
ಕನ್ನಡಪ್ರಭ ವಾರ್ತೆ, ಹೊನ್ನಾವರ, ಜ. 28
ಕಾರ್ಮಿಕ ಕಲ್ಯಾಣ ಮಂಡಳಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಭಾರತೀಯ ಮಜ್ದೂರ್ ಸಂಘದ ಆಶ್ರಯದಲ್ಲಿ ಫೆ. 1ರಂದು ಬೆಂಗಳೂರಿನ ಕೌಶಲ್ಯ ಭವನದ ಎದುರು ಪ್ರತಿಭಟನೆ ನಡೆಯಲಿದೆ ಎಂದು ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮಲ್ಲಾರಿ ಜೋಯಿಸ್ ತಿಳಿಸಿದರು.
ಪಟ್ಟಣದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2010 ಮತ್ತು 2011ರಲ್ಲಿ ಕಲ್ಯಾಣ ಮಂಡಳಿ ಪರಿಷ್ಕರಿಸಿದ ಸೌಲಭ್ಯಗಳ ಬಿಲ್ ಈ ತನಕ ಪಾಸ್ ಆಗಿಲ್ಲ. ಇದರಿಂದಾಗಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಹೇಳಿದರು.
ಕಟ್ಟಡ ಕಾರ್ಮಿಕರಿಗೆ ಸಿಗುವ ವೈದ್ಯಕೀಯ ಸವಲತ್ತುಗಳನ್ನು ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಲು ಅವಕಾಶ ಇಲ್ಲ. ಈ ಅವಕಾಶ ಕಲ್ಪಿಸಿಕೊಡುವಂತೆ ಮುಷ್ಕರದ ಸಂದರ್ಭದಲ್ಲಿ ಆಗ್ರಹಿಸಲಾಗುವುದು ಎಂದು ಅವರು ಹೇಳಿದರು. ರಾಜ್ಯದ ಎಲ್ಲೆಡೆ ಕೆನರಾ ಬ್ಯಾಂಕಿನ ಶಾಖೆಗಳಲ್ಲಿ ಕಟ್ಟಡ ಕಾರ್ಮಿಕರ ಫಲಾನುಭವಿಗಳ ಶುಲ್ಕ ತುಂಬಲು ಹೋದಾಗ ಬೇಗನೆ ಡಿಡಿ ಕೊಡುವುದಿಲ್ಲ. ಸಾಯಂಕಾಲ ಬನ್ನಿ, ನಾಳೆ ಬನ್ನಿ ಎಂದು ಸತಾಯಿಸುತ್ತಾರೆ. ಅಲ್ಲದೇ ಬ್ಯಾಂಕಿನಲ್ಲಿ ಡಿಡಿ ಶುಲ್ಕ ಕಟ್ಟಿಸಿಕೊಳ್ಳುತ್ತಾರೆ.ಅಧಿಕಾರಿಗಳು ಸಹಕರಿಸುವುದಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಮಿಕರಿಗೆ ತೊಂದರೆ ಆಗದಂತೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ರಾಜ್ಯ ಉಸ್ತುವಾರಿ ಎಂ.ಡಿ. ಸವಣೂರು, ಬಿಎಂಎಸ್ ಕಾರ್ಯದರ್ಶಿ ಆರ್. ಶೇಷಾದ್ರಿ, ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ರವಿ ವಾಟ್ವೆ, ರಾಜ್ಯ ಉಪಾಧ್ಯಕ್ಷ ನಾರಾಯಣ ಗೌಡ, ಜಿಲ್ಲಾ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ ಉಪಸ್ಥಿತರಿದ್ದರು.