ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ತುಂಗಾ ಮೇಲ್ದಂಡೆ ಉಪಕಾಲುವೆ ಪೂರ್ತಿಗೊಳಿಸಿ: ಪ್ರತಿಭಟನೆ

Rashmi Kasaragodu
Updated On : 29 Jan 2013, 12:42 pm





ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜ. 28
ತುಂಗಾ ಮೇಲ್ದಂಡೆ ಉಪಕಾಲುವೆಗಳನ್ನು ಸಂಪೂರ್ಣವಾಗಿ ಮುಗಿಸಬೇಕು. ಈ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕವಾಗಿ ಪರಿಹಾರ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ (ಪ್ರೊ. ನಂಜುಂಡಸ್ವಾಮಿ ಬಣ) ತಾಲೂಕಿನ ರಟ್ಟಿಹಳ್ಳಿ ಉಪತಹಸೀಲ್ದಾರ್ ಕಚೇರಿಗೆ  ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲೂಕಾಧ್ಯಕ್ಷ ರಾಜಶೇಖರ ದೂದಿಹಳ್ಳಿ, ನಮ್ಮನ್ನಾಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಳೆದ 65 ವರ್ಷಗಳಿಂದ ರೈತರನ್ನು ನಿರ್ಲಕ್ಷಿಸಿದ್ದಾರೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ತಾಲೂಕಿನ ಬಹುದಿನಗಳಿಂದ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಈ ಭಾಗದ ಯಲಿವಾಳ ಏತ ನೀರಾವರಿ ಯೋಜನೆ ಪುನಃ ಆರಂಭವಾಗಬೇಕು. ಸಂಧ್ಯಾ ಸುರಕ್ಷಾ, ವಿಧವಾವೇತನ, ಅಂಗವಿಕಲ ವೇತನ, ರೇಷನ್ ಕಾರ್ಡ್‌ಗಳ ತಾರತಮ್ಯ ನೀತಿ ಬದಲಾಗಬೇಕು. ರಟ್ಟಿಹಳ್ಳಿ ಹಾಗೂ ಶಿರಗಂಬಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಅದರ ಸಂಪೂರ್ಣ ಡಾಂಬರೀಕರಣ ಮಾಡಬೇಕು. ಸುವರ್ಣ ಭೂಮಿ 2ನೇ ಹಂತದ ಪರಿಹಾರ ನೀಡಬೇಕು. ರಟ್ಟಿಹಳ್ಳಿ ಕೃಷಿ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿ ತಕ್ಷಣ ನೇಮಿಸುವಂತೆ ಆಗ್ರಹಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ನೇಮಿಸಬೇಕು. ಸಣ್ಣ, ಅತಿಸಣ್ಣ ರೈತರಿಗೆ ನೇರವಾಗಿ ಬೆಳೆ ಪರಿಹಾರ ಅವರ ಖಾತೆಗೆ ಜಮಾ ಮಾಡಬೇಕು. ಶೇ.80ರಷ್ಟು ಅಂಗವಿಕಲತೆ ಹೊಂದಿದ್ದರೂ ಉಪತಹಸೀಲ್ದಾರರು ಸರ್ಕಾರ ಮಂಜೂರು ಮಾಡಿದ # 1 ಸಾವಿರ ಬದಲಾಗಿ # 400 ಮಂಜೂರು ಮಾಡಿದ್ದು ಇದನ್ನು ಸರಿಪಡಿಸುವಂತೆ ಆಗ್ರಹಿಸಿದರು. ಈ ಕುರಿತ ಮನವಿಯನ್ನು ಉಪತಹಸೀಲ್ದಾರ್ ಎ.ವಿ. ಶಿಗ್ಗಾಂವಿ ಅವರಿಗೆ ಸಲ್ಲಿಸಿದರು. ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಉಪತಹಸೀಲ್ದಾರ್ ಕಚೇರಿಗೆ ಸಾಗಿ ಅಲ್ಲಿ ಪ್ರತಿಭಟನೆ ನಡೆಸಿದರು. ರೈತ ಸಂಘದ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ಎಸ್.ಎಸ್. ಗುರುಮಠ, ಫಯಾಜ ದೊಡ್ಮನಿ, ಬಸವಣ್ಣೆಪ್ಪ ಕಿಚಡೇರ, ಮಲ್ಲನಗೌಡ ಸೊರಟೂರು, ರಾಜು ಕೂಗುರು, ಉಮೇಶ ಹೊಸಮನಿ, ಪೀರಪ್ಪ ಪೂಜಾರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement