ರುದ್ರಮುನಿ ಶಿವಯೋಗಿ ಸ್ಮರಣೆ
ಹಾವೇರಿ: ಬೌದ್ಧಿಕ ಸಂತೋಷ ಹಾಗೂ ನೈತಿಕ ಸುಖ ಚರಿತ್ರೆಯ ಪ್ರಯೋಜನಗಳಾಗಿದ್ದು, ಚರಿತ್ರೆಯನ್ನು ಪ್ರತಿಯೊಬ್ಬರೂ ನಂಬಬೇಕು ಎಂದು ಹತ್ತಿಮತ್ತೂರಿನ ನಿಜಗುಣ ಶ್ರೀಗಳು ನುಡಿದರು. ತಾಲೂಕಿನ ಅಗಡಿ ಪ್ರಭುಸ್ವಾಮಿ ಮಠದ ರುದ್ರಮುನಿ ಶಿವಯೋಗಿಗಳವರ 53ನೇ ಸ್ಮರಣೋತ್ಸವದಲ್ಲಿ ಅನುಭಾವಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಲಿಂಗನಾಯಕನಹಳ್ಳಿಯ ಚನ್ನವೀರ ಶ್ರೀಗಳು, ಹೊಳೆಇಟಗಿಯ ಮಡಿವಾಳ ಸ್ವಾಮೀಜಿ, ಕಂಪ್ಲಿಯ ಅನುಭವಪ್ರಭು ಶ್ರೀಗಳು ಹಾಗೂ ಚಿಕ್ಕೇರೂರಿನ ಚಂದ್ರಶೇಖರ ಸ್ವಾಮೀಜಿ ಮಾತನಾಡಿದರು. ಡಾ. ಸತೀಶ ಈಳಿಗೇರ, ಶಿವಬಸಪ್ಪ ಬಸೇಗಣ್ಣಿ, ಪ್ರಸನ್ನ ಮಣ್ಣೂರ, ರೇಣುಕಾ ಈಳಿಗೇರ, ಶಂಕರಪ್ಪ ಕೆರಿಕೋಡಿ ಹಾಗೂ ಇಂದುಮತಿ ಕರ್ಜಗಿ ಅವರನ್ನು ಮಠಾಧ್ಯಕ್ಷ ಸಂಗನಬಸವ ಸ್ವಾಮೀಜಿ ಗೌರವಿಸಿದರು. ಗುರುಸಿದ್ಧದೇವರು ಸ್ವಾಗತಿಸಿದರು. ಪ್ರಾಚಾರ್ಯ ಕೃಷ್ಣಾ ಜವಳಿ ನಿರ್ವಹಿಸಿದರು. ಮಹಾಂತೇಶ ಮೂಲಿಮನಿ ವಂದಿಸಿದರು.