ಮಠಾಧೀಶರ ನಡಿಗೆ ಕಳಸಾ ಬಂಡೂರಿಯತ್ತ
ಕನ್ನಡಪ್ರಭ ವಾರ್ತೆ, ನರಗುಂದ, ಜ. 29
ಉತ್ತರ ಕರ್ನಾಟಕ ಭಾಗದಲ್ಲಿನ ರೈತರ ಹಿತದೃಷ್ಟಿಯಿಂದ ಮಹತ್ವ ಪಡೆದುಕೊಂಡಿರುವ ಕಳಸಾ ಬಂಡೂರಿ ನೀರಾವರಿ ಯೋಜನೆಯು ಬಹುನಿರೀಕ್ಷೆಯ ಯೋಜನೆಯಾಗಿದೆ.
ಈ ಹಿಂದೆ ಆಳಿದ ರಾಜಕೀಯ ನಾಯಕರ ಇಚ್ಚಾಶಕ್ತಿಯ ಕೊರತೆಯಿಂದ ಯೋಜನೆ ಪೂರ್ಣಗೊಳ್ಳದೇ ವಿಳಂಬವಾಗುತ್ತ ಸಾಗಿದೆ. ಈ ಭಾಗದ ಜನರು ತಾವು ಬೆಳೆದ ಬೆಳೆಗೆ ನೀರಿನ ಕೊರತೆ ಎದುರಿಸುತ್ತಾ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ಬಂದೊದಗಿದ್ದು, ಇದರ ವಿರುದ್ದ ನಾಡಿನ ಮಠಾಧೀಶರೇ ಹೋರಾಟದ ಹಾದಿ ಹಿಡಿಯುವ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದಾರೆ.
ಕೋರ್ಟ್ ಆದೇಶ: 2013ನೇ ವರ್ಷ ಮುಗಿಯುವುದರಲ್ಲಿ ಎಲ್ಲ ನದಿಗಳ ಜೋಡಣೆ ಕಾರ್ಯ ಮುಗಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ಮಾಡಿದ್ದರೂ ಈಗಿನ ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ಕಳಸಾ ಬಂಡೂರಿ ಯೋಜನೆಗೆ ನ್ಯಾಯಾಧೀಕರಣ ಮಾಡಿ ಕಾನೂನಿಗೆ ವಂಚನೆ ಮಾಡಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹೆಚ್ಚು ಆಸಕ್ತಿ ವಹಿಸಿ ಪೂರ್ಣಗೊಳಿಸಿದರೆ 4 ಜಿಲ್ಲೆಗೆ ಅನುಕೂಲವಾಗಲಿದೆ. ನರಗುಂದ, ನವಲಗುಂದ, ರೋಣ, ರಾಮದುರ್ಗ, ಬದಾಮಿ, ಸವದತ್ತಿ, ಹುಬ್ಬಳ್ಳಿ, ಧಾರವಾಡ, ಗದಗ, ಈ ಎಲ್ಲ ತಾಲೂಕುಗಳಲ್ಲಿ ನೀರು ಒದಗಿಸಲು ಸಾಧ್ಯವಿದೆ.
ಇಂದು ಮಠಾಧೀಶರ ಹೋರಾಟ: ಈ ಯೋಜನೆಗೆ ಚಾಲನೆ ನೀಡಿ 52 ವರ್ಷ ಗತಿಸಿದರೂ ಕೂಡ ಕೇವಲ ಕಳಸಾ ಹಳ್ಳಕ್ಕೆ # 49.5 ಕೋಟಿ ಬಿಡುಗಡೆ ಮಾಡಿದೆ. ಇನ್ನು ಬಂಡೂರಿಗೆ # 45.5 ಕೋಟಿ ಬಿಡುಗಡೆಗೊಳಿಸಿದರೂ ಕೂಡ ಇಲ್ಲಿವರೆಗೆ ಈ ಹಳ್ಳಕ್ಕೆ ಟೆಂಡರ್ ಕರೆದಿಲ್ಲ. ಈ ಯೋಜನೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಜ. 30ರಂದು ಈ ಭಾಗದ ಎಲ್ಲ ಮಠಾಧೀಶರು ಹೋರಾಟಕ್ಕೆ ಮುಂದಾಗಿರುವುದು 4 ಜಿಲ್ಲೆಯ ರೈತರ ಪಾಲಿಗೆ ದೊಡ್ಡ ಆನೆ ಬಲ ಬಂದಂತಾಗಿದೆ.