ಯೂನಿಕೋಡ್ ಅಭಿವೃದ್ಧಿಯಾಗಲಿ
ಗುದ್ಲೇಪ್ಪ ಹಳ್ಳಿಕೇರಿ ವೇದಿಕೆ, ಹೊಸರಿತ್ತಿ, ಜ.31
ಕನ್ನಡ ತಂತ್ರಾಂಶ ಯೂನಿಕೋಡ್ ಅಭಿವೃದ್ಧಿಪಡಿಸಬೇಕು. ಇದರಿಂದ ಮಾತ್ರ ಕನ್ನಡ ಭಾಷೆ ವಿಶ್ವಕ್ಕೆ ಪರಿಚಯವಾಗುತ್ತದೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಪದವಿ ಕಾಲೇಜು ನಿವೃತ್ತ ಪ್ರಾಚಾರ್ಯ ಅಲ್ಲಮಪ್ರಭು ಬೆಟದೂರು ಹೇಳಿದರು.
ಹಾವೇರಿ ಜಿಲ್ಲೆ ಹೊಸರಿತ್ತಿಯಲ್ಲಿ ನಡೆದ ಜಿಲ್ಲಾ ಕಸಾಪ ಸಮ್ಮೇಳನದ ಸಂವಾದ ಗೋಷ್ಠಿಗೆ ಚಾಲನೆ ನೀಡಿ, ಕನ್ನಡ ಜಗತ್ತು ಅದರ ಮುಂದಿರುವ ಸವಾಲುಗಳು ಕುರಿತು ಮಾತನಾಡಿದರು.
ಕುಂಠಿತ: ವಿಷಾದ: ಸಾಫ್ಟವೇರ್ ಉದ್ಯಮದಲ್ಲಿ ಕನ್ನಡಿಗರು ಜಗತ್ತಿನಲ್ಲೇ ಹೆಸರು ಮಾಡಿದ್ದಾರೆ. ಆದರೆ, ಅವರಿಂದ ಕನ್ನಡಕ್ಕೆ ಅವಶ್ಯವಿರುವ ತಂತ್ರಾಂಶ ಅಭಿವೃದ್ಧಿಪಡಿಸಲು ಸಾಧ್ಯವಾಗದಿರುವುದು ವಿಷಾದನೀಯ ಎಂದರು. ಕನ್ನಡ ಭಾಷೆಗೆ ಇಂಗ್ಲಿಷ್ ರೋಗದಂತೆ ಅಂಟಿಕೊಂಡಿದ್ದು, ಮಕ್ಕಳಲ್ಲಿ ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಇನ್ನಿಲ್ಲದಂತಾಗುತ್ತಿರುವುದು ದುರ್ದೈವದ ಸಂಗತಿ. ಉದ್ಯೋಗದಲ್ಲಿ ಸ್ಥಳೀಯ ಕನ್ನಡಿಗರಿಗೆ ಲಭ್ಯವಾಗಬೇಕು ಎಂದು ಆಗ್ರಹಿಸಿದರು.
ಬಳಕೆಯಲ್ಲಿಲ್ಲದ ಪದ ತೆಗೆದು ಹಾಕಿ: ಟಿಪ್ಪಣಿ ಮಂಡಿಸಿದ ಚಳ್ಳಕೆರೆ ಪ್ರಾ. ಡಿ. ಅಂಜನಪ್ಪ, ಜಾಗತೀಕರಣ, ಖಾಸಗೀಕರ, ಉದಾರೀಕರಣಗಳು ಕನ್ನಡ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಕನ್ನಡ ಭಾಷೆಯನ್ನು ಬದುಕಿಗೆ ಅನ್ನ ಹಾಕುವ ಭಾಷೆಯನ್ನಾಗಿ ಬೆಳೆಸುವ ಕಾರ್ಯವಾಗಬೇಕೆಂದರು. ಪರಿಶುದ್ಧ ಕನ್ನಡ ಮಾತನಾಡಬೇಕೆಂದರೆ ಬಳಕೆಯಲ್ಲಿಲ್ಲದ ಕನ್ನಡ ಅಕ್ಷರಗಳನ್ನು ತೆಗೆದು ಹಾಕಬೇಕು. ಇಲ್ಲದಿದ್ದರೆ ಕಲಿಯುವುದು, ಮಾತನಾಡುವುದೂ ಎರಡೂ ತಪ್ಪಾಗುತ್ತದೆ ಎಂದರು.
ಶಿಕ್ಷಕರಿಂದ ಕುಲಗೆಟ್ಟ ಕನ್ನಡ: ಕವಿ ಗಂಗಾಧರ ನಂದಿ ಮಾತನಾಡಿ, ಕನ್ನಡ ಇಂದು ಕಂಗ್ಲಿಷ್ ಆಗಲು ಮಾಧ್ಯಮಗಳೇ ಕಾರಣ ಎಂದು ಪ್ರತಿಪಾದಿಸಿದರು.
ಕವಿ ವಿಜಯಕಾಂತ ಪಾಟೀಲ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರಿಂದಲೇ ಕನ್ನಡ ಇಂದು ಸಾಕಷ್ಟು ಅಧೋಗತಿಗೆ ಹೋಗಿದೆ. ಪ್ರಾಥಮಿಕ ಶಾಲೆ ಶಿಕ್ಷಕರು ಶುದ್ಧ ಕನ್ನಡದಲ್ಲಿ ಮಾತನಾಡಬೇಕು. ಇದು ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರಬಲ್ಲದು ಎಂದರು.
ಡಬ್ಬಿಂಗ್ನಿಂದ ಕನ್ನಡಕ್ಕೆ ಧಕ್ಕೆ: ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ನಂಗಲಿ ಮಾತನಾಡಿ, ಡಬ್ಬಿಂಗ್ ಸಂಸ್ಕೃತಿಯಿಂದ ಇಂದು ಕನ್ನಡ ಭಾಷೆ ಅವನತಿಯತ್ತ ಸಾಗಿದೆ. ವಿವಿಧ ಭಾಷಾ ನಟರು ಭಾಷೆ ಬರದಿದ್ದರೂ ಸಹ ಇಂದು ಕನ್ನಡ ಚಲನಚಿತ್ರರಂಗದಲ್ಲಿ ಬಹಳಷ್ಟು ಖ್ಯಾತಿ ಪಡೆದಿದ್ದು, ಕನ್ನಡ ಚಲನಚಿತ್ರ ನಟರ ಬದುಕನ್ನು ಕಸಿದುಕೊಂಡಿದ್ದಾರೆ ಎಂದರು. ಸಂವಾದ ಗೋಷ್ಠಿಯಲ್ಲಿ ಡಾ. ಲಿಂಗರಾಜ ಅಂಗಡಿ, ಡಾ. ಶೇಖರ ಸಜ್ಜನ, ಬಿ.ಎಂ. ಜಗಾಪುರ, ಇನ್ನಿತರರು ಇದ್ದರು. ಬಸವರಾಜ ಬಸರೀಕಟ್ಟಿ ಸ್ವಾಗತಿಸಿದರು, ರಾಘವೇಂದ್ರ ಹಂಚಿನಮನಿ ಹಾಗು ಅಶೋಕ ಗೊಲ್ಲರ ನಿರೂಪಿಸಿದರು. ಆನಂದ ಮುದಕಮ್ಮನವರ ವಂದಿಸಿದರು.