ಬೆಳೆಗೆ ರೋಗ, ಕೀಟಬಾಧೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜು. 1
ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ರೈತರು ಬಿತ್ತಿದ ಬೆಳೆಗಳು ಬಾರದೆ ನಲುಗಿದ ರೈತರು ಪ್ರಸಕ್ತ ವರ್ಷ ಬಿತ್ತನೆ ಬೀಜಕ್ಕಾಗಿ ಕಾಯದೆ ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜಗಳು, ರಸಾಯನಿಕ ಗೊಬ್ಬರಗಳು ದೊರಕಿದ್ದು, ಬಿತ್ತನೆ ಕೆಲಸವು ಭರದಿಂದ ಸಾಗಿದ್ದು, ಮುಕ್ತಾಯ ಹಂತ ತಲುಪಿದೆ.
ತಾಲೂಕಿನಲ್ಲಿ ಇನ್ನು ಕೆಲ ಭೂಮಿಗಳು ಬಿತ್ತನೆಯಾಗುತ್ತಿದ್ದು, ಬತ್ತ ಹಾಗೂ ಬತ್ತಕ್ಕೆ ಬೆಂಕಿ ರೋಗ, ಕಂದು ಜಿಗಿ ಹುಳು, ಸೋಯಾ ಅವರೆಗೆ ಎಲೆ ತಿನ್ನುವ ಕಾಟ, ಹತ್ತಿಗೆ ಜಿಗಿಹುಳು, ಹೇನಿನ ಕಾಟವಾಗಿದ್ದು, ತಕ್ಷಣ ಹಲವಾರು ರೋಗಗಳು ಬಂದಿದ್ದು, ಕೀಟನಾಶದಿಂದ ಸಿಂಪಡಿಸಿ ರೈತರು ಬೆಳೆಯನ್ನು ಪಡೆದುಕೊಳ್ಳಬೇಕಾದ ಸ್ಥಿತಿ ಬಂದಿದೆ.
ತಾಲೂಕಿನಲ್ಲಿ ಜೂನ್ ಅಂತ್ಯದವರಗೆ 246 ಮಿ. ಮೀ ಮಳೆಯಾಗಬೇಕಾಗಿತ್ತು. ಆದರೆ, ಇಲ್ಲಿಯವರೆಗೆ ಬಿದ್ದ ಒಟ್ಟು ಮಳೆ 190.56 ಸೇ.ಮೀ ಒಟ್ಟಾರೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಗುರಿ ಕ್ಷೇತ್ರ 3895 ಹೇಕ್ಟರ್ ಪ್ರದೇಶ ಇಲ್ಲಿಯವರೆಗೆ ಬಿತ್ತನೆಯಾದ ಕ್ಷೇತ್ರ 30,215 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಂದುವರಿದಿದೆ.
ಬತ್ತಕ್ಕೆ ಕಂದು ಜಿಗಿಹುಳುವಿನ ಬಾಧೆ: ತಾಲೂಕಿನಲ್ಲಿ ಬತ್ತಕ್ಕೆ ಕಂದು ಜಿಗಿಹುಳುವಿನ ಬಾಧೆ ಹೆಚ್ಚಾಗಿದ್ದು, ಇದು ಫೆಬ್ರವರಿ, ಮಾರ್ಚ್ನಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಪ್ರೌಢ ಕೀಟ ಪೈರಿನ ಬುಡದಲ್ಲಿ ರಸ ಹೀರುವುದರಿಂದ ಗಿಡ ಹಳದಿಯಾಗಿ ಒಣಗಲಾರಂಭಿಸುತ್ತದೆ ಮತ್ತು ಬತ್ತದ ಕ್ಷೇತ್ರದಲ್ಲಿ ಕಂದು ಜಿಗಿಹುಳುವಿನ ಬಾಧೆಯಿಂದ ಅಲ್ಲಲ್ಲಿ ವರ್ತುಲಾಕಾರವಾಗಿ ಸುಟ್ಟಂತೆ ಕಂಡು ಬರುತ್ತದೆ. ಇದನ್ನು ಜಿಗಿ ಸುಡು ಎಂದು ಕರೆಯುತ್ತಾರೆ.
ಈ ಕೀಟವು ರಸ ಹೀರುವಾಗ ಒಂದು ರೀತಿಯ ಸಹಿ ದ್ರವವನ್ನು ಬತ್ತದ ಎಲೆಗಳ ಮೇಲೆ ಸ್ರವಿಸುತ್ತದೆ. ಈ ದ್ರವದ ಮೇಲೆ ಶಿಲೀಂಧ್ರ ಬೆಳೆದು ಮೇವಿಗೆ ಅನುಪಯುಕ್ತವಾಗಿರುತ್ತದೆ. ಇದರ ಹತೋಟಿಗಾಗಿ ಅಧಿಕ ಸಾರಜನಿಕ ರಸಗೊಬ್ಬರ ಬಳಸಬಾರದು.
ಕೀಟ ನಾಶಕ ಸಿಂಪಡಿಸಿ: ಸಸಿ ಮಡಿಯು 75 ಗ್ರಾಂ ಪೊರೈಟ್ ಕೀಟನಾಶಕವನ್ನು ಬಿತ್ತನೆಗೆ ಮುಂಚೆ ಮಣ್ಣಿನಲ್ಲಿ ಬೆರಸಬೇಕು. ನಾಟಿ ಮಾಡಿದ ನಂತರ 1.3 ಮಿ.ಲೀ ಮೋನೋಕ್ರೋಟೋಫಾಸ್ 36 ಎಸ್ಎಲ್ ಅಥವಾ 2 ಮಿ.ಲೀ ಕ್ಲೋರೋಫಾರಿಫಾಸ 20 ಎಸಿ 1 ಲೀಟರ್ ನೀರಿನಲ್ಲಿ ಬೆರಸಿ ಪೈರಿನ ಬುಡದಲ್ಲಿ ಸಿಂಪರಣೆ ಮಾಡಬೇಕು. ಪ್ರತಿ ಎಕರೆಗೆ 400 ಲೀ ಸಿಂಪರಣಾ ದ್ರಾವಣ ಬೇಕು. ಭತ್ತದ ಕೊಯ್ಲಿನ ನಂತರ ಬದುಗಳಿಗೆ ಕ್ಲೊರೋಪೈರಿಫಾಸ ಹುಡಿಯನ್ನು ಧೂಳಿಕರಿಸಬೇಕು.
ಬತ್ತದ ಬೆಳೆಯಲ್ಲಿ ಬೆಂಕಿ ರೋಗದ ಹತೋಟಿಗಾಗಿ ಶಿಗ್ಗಾಂವಿ ಬತ್ತದ ಬೆಳೆಯಲ್ಲಿ ಬೆಂಕಿರೋಗದ ಬಾಧೆ ಕಾಣಿಸಿಕೊಂಡಿದ್ದು, ಎಲೆಯ ಮೇಲೆ ಚಿಕ್ಕ ಕಂದು ಬಣ್ಣದ ಚುಕ್ಕೆಗಳನ್ನು ಕಾಣಬಹುದು. ನಂತರ ಇಂತಹ ಚುಕ್ಕೆಗಳ ಗಾತ್ರ ಹೆಚ್ಚಾಗುತ್ತದೆ.
ಬೆಳೆ ಮೇಲೆ ತ್ರೀವ್ರ ಪರಿಣಾಮ: ಚುಕ್ಕೆಯ ಮಧ್ಯಭಾಗ ಅಗಲವಾಗಿದ್ದು, ಎರಡು ತುದಿಗಳು ಚೂಪಾಗಿರುತ್ತವೆ. ನಂತರ ಚುಕ್ಕೆಗಳು ಸಂಪೂರ್ಣ ಸುಟ್ಟಂತೆ ಕಾಣಿಸುತ್ತವೆ. ಈ ರೋಗದ ಲಕ್ಷಣಗಳು ಎಲೆ, ತೆನೆ ಹಾಗೂ ಕಾಳುಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಕತ್ತಿನ ಭಾಗಕ್ಕೆ ಬಂದಾಗ ಆ ಭಾಗ ಕಪ್ಪಾಗಿ ತೆನೆ ಮುರಿದು ಬಿಳುತ್ತದೆ.
ಬೀಜೋಪಚಾರದಿಂದ ಬಿತ್ತನೆ ಮಾಡಿ: ಕಾಳು ಕಟ್ಟುವ ಮೊದಲು ರೋಗ ಕಾಣಿಸಿಕೊಂಡು ಕಾಳುಗಳು ಜೊಳ್ಳಾಗುತ್ತವೆ. ಇದರ ನಿರ್ವಹಣೆಗಾಗಿ ಪ್ರತಿ ಕೆಜಿ ಬೀಜಕ್ಕೆ 2 ಗ್ರಾಂ ಕಾರ್ಬನ್ಡೈಜಿಮ್ 50 ಡಬ್ಲ್ಯುಪಿ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.
ಪ್ರತಿ ಲೀಟರ್ ನೀರಿಗೆ 10 ಗ್ರಾಂ ಸುಡೋಮೊನಾಸ್ ಬೇರಸಿದ ದ್ರಾವಣದಲ್ಲಿ 30 ನಿಮಿಷ ಬೀಜಗಳನ್ನು ನೆನೆಸಿ ಬಿತ್ತಬೇಕು. ರೋಗದ ಲಕ್ಷಣಗಳು ಕಾಣಿಸಿದರೆ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಕಾರ್ಬನ್ಡೈಜಿಯಂ ಅಥವಾ 1 ಮಿ. ಲೀಟರ್ ಎಡಿಪಿನ್ಪಾಸ್ ಅಥವಾ 0.6 ಗ್ರಾಂ ಟ್ರೈಸೈಕ್ಲವೊಜೆಲ್ ಅಥವಾ 1 ಮಿ.ಲೀ ಕಿಟಾಜಿನ್ ಬೆರಸಿ ಸಿಂಪರಿಸಬೇಕು.
ಕೀಟನಾಶಕದಿಂದ ರೋಗಕ್ಕೆ ಕಡಿವಾಣ: ಸೋಯಾ ಅವರೆಯಲ್ಲಿ ಎಲೆ ತಿನ್ನುವ ಕೀಡೆ ಹತೋಟಿಗಾಗಿ ಸೋಯಾ ಅವರೆ ಬೆಳೆಯಲ್ಲಿ ಎಲೆ ತಿನ್ನುವ ಕೀಟ ಕಂಡು ಬಂದಿದ್ದು, ಮರಿ ಕೀಟಗಳು ಮೊದಲು ಎಲೆಯ ಹಸಿರು ಭಾಗವನ್ನು ಕೊರೆದು ತಿನ್ನುವವು ಎಲೆಗಳು ಬಿಳಿ ಪರದೆಯಂತೆ ಕಾಣುವವು. ಇವುಗಳ ಹತೋಟಿಗಾಗಿ ಬೆಳೆಯ ಅಂಚಿನಲ್ಲಿ 2 ಅಥವಾ 3 ಸಾಲು ಔಡಲ ಅಥವಾ ಸೂರ್ಯಕಾಂತಿ ಬೆಳೆ ಬೆಳೆಯುವುದರಿಂದ ಕೀಟ ನಿರ್ವಹಣೆ ಮಾಡಬಹುದು. 1.0 ಮಿ.ಲೀ ಮೊನೋಕ್ರೊಟೊಪಾಸ್ 36 ಅಥವಾ 2.5 ಮಿಲೀ ಕ್ಲೋರೊಫೈರಿಫಾಸ್ ಅಥವಾ 2 ಮಿ.ಲೀ ಕ್ವಿನಾಲಫಾಸ್ 25 ಇಅ. ಒಂದು ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. 1 ಗ್ರಾಂ ನ್ಯೂಮೇರಿಯಾ ಪ್ರತಿ ಲೀಟರ್ ನೀರಿಗೆ ಬೆರಸಿ ಸಂಜೆ ಸಿಂಪರಿಸಬೇಕು.
ಹತ್ತಿಯಲ್ಲಿ ಜಿಗಿಹುಳು ಮತ್ತು ಹೇನಿನ ನಿರ್ವಹಣೆಗಾಗಿ ಹೇನುಗಳು ಎಲೆಗಳ ಕೆಳಗಡೆ ರಸ ಹಿರುವುದರಿಂದ ಕಪ್ಪು ಬೂಸ್ಟ್ ಬೆಳೆದು ಎಲೆಗಳು ಕಪ್ಪಾಗುತ್ತವೆ. ಇವುಗಳ ಹತೋಟಿಗಾಗಿ 0.25 ಮಿ. ಲೀಟರ್ ಇಮಿಡಾಕ್ಲೋಫ್ರಿಡ್, 17 ಎಸ್ಎಲ್ ಅಥವಾ 2 ಮಿ.ಲೀ ಥೈಯಮಿಥೋಯೆಟ್ನ್ನು 1 ಲೀಟರ್ ನೀರಿಗೆ ಬೆರಸಿ ಸಿಂಪರಿಸಬೇಕು. ಜಿಗಿ ಹುಳುವಿನ ಬಾಧೆಯನ್ನು ನಿಯಂತ್ರಿಸಲು 2 ಮಿ.ಲೀ ಥೈಮಿಥೋಯೆಟನ್ನು 1 ಲೀಟರ್ ನೀರಿಗೆ ಬೆರಸಿ ಸಿಂಪರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು ಶಿಗ್ಗಾಂವಿ ಹಾಗೂ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
-ಬಸವರಾಜ ಹಿರೇಮಠ