ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬೆಳೆವಿಮೆ: ಮರು ಪರಿಶೀಲಿಸಿ

Lingaraj Badiger
Updated On : 2 Jul 2013, 11:16 am

ಹಾನಗಲ್ಲ: ಬೆಳೆವಿಮೆ ತಾರತಮ್ಯದಿಂದ ನಲುಗಿರುವ ಹಾನಗಲ್ಲ ತಾಲೂಕಿನ ರೈತನ ಸಹಾಯಕ್ಕೆ ಸರ್ಕಾರ ಬಂದು ಬೆಳೆವಿಮೆ ಜಾರಿಯಲ್ಲಿ ಮರು ಪರಿಶೀಲನೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸರ್ಕಾರವನ್ನು ಒತ್ತಾಯಿಸಿದೆ.
ಸೋಮವಾರ ನಗರದ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕವೇ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂಘ ಕೂಡಲೆ ಹಾನಗಲ್ಲ ತಾಲೂಕಿನ 2012-13ರ ಕೃಷಿ ವರ್ಷದ ಬೆಳೆಗೆ ಪ್ರಕಟವಾದ ವಿಮೆ ಪರಿಹಾರ ಮೊತ್ತವನ್ನು ಮರು ಪರಿಶೀಲಿಸಬೇಕು. ಅಲ್ಲದೆ, ಹಾನಗಲ್ಲ, ಅಕ್ಕಿಆಲೂರು ಹೋಬಳಿಗಳ ನೀರಾವರಿ ಬತ್ತಕ್ಕೆ ವಿಮೆ ಪರಿಹಾರ ಪ್ರಕಟಿಸದೆ ಈ ಭಾಗದ ರೈತರಿಗೆ ತಾರತಮ್ಯ ಮಾಡಲಾಗಿದೆ ಹಾಗೂ ಇದೇ ಹೋಬಳಿಯ ಖುಷ್ಕಿ ಬತ್ತಕ್ಕೂ ಕೂಡಾ ಅತ್ಯಂತ ಕಡಿಮೆ ಬೆಳೆವಿಮೆ ಪ್ರಕಟವಾಗಿದೆ.
ಕಳೆದ ವರ್ಷ ಹಾನಗಲ್ಲ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಲಾಗಿತ್ತು. ಕೆರೆ ಕಟ್ಟೆಗಳಲ್ಲಿ ನೀರಿರಲಿಲ್ಲ. ಶೇ. 5ರಷ್ಟೂ ಬೆಳೆ ಬಂದಿಲ್ಲ. ಇಷ್ಟಾಗಿಯೂ ಕೂಡಾ ಬೆಳೆವಿಮೆ ಪರಿಹಾರ ನಿಗದಿ ಪಡಿಸುವಲ್ಲಿ ಉದ್ದೇಶಪೂರ್ವಕವಾಗಿ ತಿರಸ್ಕಾರ ಕಂಡು ಬಂದಿದೆ. ರೈತನನ್ನು ಈ ಮೂಲಕ ಕಡೆಗಣಿಸಲಾಗಿದೆ. ಇದರ ಪರಿಣಾಮವಾಗಿ ರೈತ ಚಿಂತೆಗೊಳಗಾಗಿದ್ದಾನೆ. ಸರ್ಕಾರ ಕೂಡಲೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರೈತನಿಗೆ ನ್ಯಾಯ ಒದಗಿಸಿಕೊಡುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ನೂತನ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ರೈತಪರ ಸರ್ಕಾರವಾಗಿ ಹಿಂದಿನ ಸರ್ಕಾರ ಮಂಡಿಸಿದ ಬಜೆಟ್‌ನ್ನು ಪುನಪರಿಶೀಲಿಸುವುದಾಗಿ ತಿಳಿಸಿದ್ದು, ಸಂತೋಷದ ಸಂಗತಿಯೇ. ಇಂತಹ ಸಂದರ್ಭದಲ್ಲಿ ರೈತನ ಕಷ್ಟ-ನಷ್ಟಗಳನ್ನು ಗಮನದಲ್ಲಿಟ್ಟುಕೊಂಡು ರೈತಪರ ನಿಲುವು ಪ್ರಕಟಿಸಿ ಕಾರ್ಯರೂಪಕ್ಕೆ ತರಬೇಕೆಂದು ಅವರು ತಿಳಿಸಿದ್ದಾರೆ.
ಈ ಸಂದರ್ಭ ರೈತ ಮುಖಂಡರಾದ ಎಂ.ಎಸ್. ಪರಪ್ಪನವರ, ಮಹಲಿಂಗಪ್ಪ ಅಕ್ಕಿವಳ್ಳಿ, ಅಡಿವೆಪ್ಪ ಆಲದಕಟ್ಟಿ, ಜಿ.ಎಸ್. ದೇಶಪಾಂಡೆ, ಎನ್.ಎಸ್. ಪಡೆಪ್ಪನವರ, ಆರ್.ಜಿ. ಹಾನಗಲ್ಲ, ಮಂಜುನಾಥ ಕೊಪ್ಪರಸಿಕೊಪ್ಪ, ಸತೀಶ ಸಾಗರಳ್ಳಿ, ವೀರಪ್ಪ ಬೈಲವಾಳ, ಶಿವಕುಮಾರ ಹಳೇಕೋಟಿ, ಹಾಲಪ್ಪ ಹಳ್ಳಕ್ಕನವರ, ವಾದಿರಾಜ ಮಡಿ, ತಾರಕೇಶ್ವರ ತಿಳವಳ್ಳಿ, ವಿ.ಎಚ್. ಕಂಬಳಿ, ಗೋಪಾಲ ಮೂಡ್ಲಿಯವರ, ನಾರಾಯಣ ಗುಡಗುಡಿ, ಶ್ರೀಕಾಂತ ಕಂಕಾಳೆ, ಕುಮಾರ ಚಿಕ್ಕಣ್ಣನವರ, ಪುಟ್ಟಪ್ಪ ಕಲ್ಲಾಪುರ, ಹನುಮಂತಪ್ಪ ತಳವಾರ, ಜಗದೀಶ ಉಮ್ಮಕ್ಕನವರ, ಸಂತೋಷ ನಿಂಗೋಜಿ, ಸತೀಶ ಸಕಾರೆ, ಗೋಪಾಲ ಹುನಗನಹಳ್ಳಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement