6ರಂದು ಬೆಂಗಳೂರು ಚಲೋ
ಹಾವೇರಿ: ಬೆಳೆ ಸಾಲ ಹಾಗೂ ಟ್ರ್ಯಾಕ್ಟರ್ ಸಾಲ ಮನ್ನಾ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿತ ಕರ್ನಾಟಕ ರೈತರ ಹಾಗೂ ಕೃಷಿ ಟ್ರ್ಯಾಕ್ಟರ್ ಮಾಲೀಕರ ಹಿತಾಭಿವೃದ್ಧಿ ಸಂಘ ಜು 6ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಬಿ. ಇನಾಮತಿ, ಬೆಂಗಳೂರು ಚಲೋ ಅಂಗವಾಗಿ ಜು. 5ರಂದು ಉತ್ತರ ಕರ್ನಾಟಕದ 3000ಕ್ಕೂ ಹೆಚ್ಚು ರೈತರು ಹುಬ್ಬಳ್ಳಿಯಲ್ಲಿ ಮಧ್ಯಾಹ್ನ ಸೇರಲಿದ್ದಾರೆ. ಅಂದು ಸಂಜೆ ಹುಬ್ಬಳ್ಳಿ ರೇಲ್ವೆ ನಿಲ್ದಾಣದಿಂದ ಪ್ಯಾಸೆಂಜರ್ ರೈಲು ಮೂಲಕ ಬೆಂಗಳೂರಿಗೆ ತೆರಳಿ, ಜು. 6ರಂದು ಬೆಳಗ್ಗೆ ರೈಲು ನಿಲ್ದಾಣದಿಂದ ಫ್ರೀಡಮ್ ಪಾರ್ಕ್‌ವರೆಗೂ ಮೆರವಣಿಗೆ ನಡೆಸಲಾಗುವುದು. ಪಾರ್ಕ್‌ನಲ್ಲಿ ಸಭೆ ನಡೆಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಲಾಗುವುದು ಎಂದರು.
ಆಗ್ರಹ: ಸಾಲ ಮನ್ನಾ ಮಾಡುವ ವಿಷಯದಲ್ಲಿ ಸರ್ಕಾರ ಸಣ್ಣ ಹಾಗೂ ದೊಡ್ಡ ರೈತರು ಎಂದು ವಿಂಗಡಣೆ ಮಾಡದೆ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು. ಟ್ರ್ಯಾಕ್ಟರ್ ಸಾಲ ಮರು ಪಾವತಿ ಮಾಡಿದ ರೈತರಿಗೆ ರಿಯಾಯ್ತಿ ದರದಲ್ಲಿ ಡೀಸೆಲ್ ವಿತರಿಸಬೇಕು. ರೈತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಎಚ್‌ಪಿ ಟ್ರ್ಯಾಕ್ಟರ್ ಖರೀದಿಸಿದ ರೈತರಿಗೆ ರು. 1 ಲಕ್ಷ ಸಬ್ಸಿಡಿ ನೀಡಬೇಕು. ರೈತರು ಪಡೆದ ಸಾಲ ಮರು ಪಾವತಿ ಮಾಡುವಂತೆ ಬ್ಯಾಂಕಿನವರು ನೋಟಿಸ್ ಜಾರಿ ಮಾಡದಂತೆ ತಡೆಯಬೇಕು. ಸಾಲ ಮರು ಪಾವತಿಸುವಂತೆ ರೈತರ ಮೇಲೆ ಬ್ಯಾಂಕಿನವರು ಒತ್ತಡ ಹೇರುತ್ತಿರುವುದನ್ನು ತಪ್ಪಿಸಬೇಕು ಮುಂತಾದ ಬೇಡಿಕೆ ಈಡೇರಿಸಲು ಆಗ್ರಹಿಸಲಾಗುತ್ತದೆ ಎಂದು ಇನಾಮತಿ ತಿಳಿಸಿದರು. ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಬೋಮ್ಮಜ್ಜಿ, ವಿರೂಪಾಕ್ಷಪ್ಪ ನಿಂಬಣ್ಣವರ, ವಿ.ಎಂ. ಹಿರೇಮಠ, ಎಚ್.ವಿ. ಕಡೆಮನಿ, ಗಂಗಾಧರ ಅಣ್ಣಿಗೇರಿ ಇದ್ದರು.
ಪುನೀತ ಲಂಗೋಟಿ ನಿಧನ
ಶಿಗ್ಗಾಂವಿ: ತಾಲೂಕಿನ ಬನ್ನೂರ ಗ್ರಾಮದ ಪುನೀತ ಗುಣಪಾಲಪ್ಪ ಲಂಗೋಟಿ (25) ಸೋಮವಾರ ನಿಧನರಾಗಿದ್ದಾರೆ. ಮೃತರು ತಂದೆ, ತಾಯಿ, ಇಬ್ಬರು ಸೋದರಿಯರು ಸೇರಿದಂತೆ ಅಪಾರ ಬಂದು ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬನ್ನೂರ ಗ್ರಾಮದಲ್ಲಿ ಜರುಗಲಿದೆ.
ಸಂತಾಪ: ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಗ್ರಾಮದ ಮುಖಂಡ ಶ್ರೀಕಾಂತ ದುಂಡಿಗೌಡರ ಸಂತಾಪ ಸೂಚಿಸಿದ್ದಾರೆ.
ಕಲ್ಲಪ್ಪ ಅರಳಿಕಟ್ಟಿ ನಿಧನ
ಶಿಗ್ಗಾಂವಿ: ತಾಲೂಕಿನ ಮುಗಳಿ ಗ್ರಾಮದ ಕಲ್ಲಪ್ಪ ಮ. ಅರಳಿಕಟ್ಟಿ (69) ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.