ಸರ್ಕಾರಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜು. 2
ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು, ಸ್ತ್ರೀ-ಶಕ್ತಿ ಸಂಘಗಳು ಸರ್ಕಾರ ನೀಡುವ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.
ಪಟ್ಟಣದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರ ಹಾವೇರಿ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಸ್ತ್ರೀ-ಶಕ್ತಿ ಭವನದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಸಾಧಿಸಿ: ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು, ಸ್ತ್ರೀ ಶಕ್ತಿ ಸಂಘಗಳು ಸರಕಾರ ನೀಡುವ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಸ್ವಾವಲಂಬಿಗಳಾಗಬೇಕು, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ತಯಾರಿಸಿದ ದೈನಂದಿನ ವಿವಿಧ ಮಾರಾಟದ ವಸ್ತುಗಳನ್ನು ಈ ಮಾರಾಟ ಮಳಿಗೆಯಲ್ಲಿ ಮಾರಾಟ ಮಾಡಿ ಆರ್ಥಿಕ ಅಭಿವೃದ್ಧಿ ಹೊಂದುವಂತೆ ಕರೆ ನೀಡಿದರು.
ಪ್ರಾಮಾಣಿಕ ಪ್ರಯತ್ನ: ರು. 15 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮಾರಾಟ ಮಳಿಗೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಹಿಳೆಯರು ತಮ್ಮ ಸಂಘದ ಇಲ್ಲವೇ ವೈಯಕ್ತಿಕ ಸಮಸ್ಯೆಗಳ ಬಗ್ಗೆ ನೇರವಾಗಿ ತಮ್ಮ ಗಮನಕ್ಕೆ ತಂದಲ್ಲಿ ಪ್ರಾಮಾಣಿಕವಾಗಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಸುತ್ತುನಿಧಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ಸ್ತ್ರೀ-ಶಕ್ತಿ ಸಂಘಗಳಿಗೆ ಸಮರ್ಪಕವಾಗಿ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅಮೋಘವಾಗಿದೆ. ಈ ನಿಟ್ಟಿನಲ್ಲಿ ರಚಿಸಿರುವ ಸ್ತ್ರೀ-ಶಕ್ತಿ ಸಂಘಗಳು ರಚನಾತ್ಮಕವಾಗಿ ಕಾರ್ಯನಿರ್ವಹಿಸುವ ಮೂಲಕ ದೇಶದ ಆರ್ಥಿಕ ಭದ್ರತೆಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಸ್ತ್ರೀ ಶಕ್ತಿ ಸಂಘಗಳು ಬ್ಯಾಂಕಿನಲ್ಲಿ ಠೇವಣಿ ಇಟ್ಟ ಉಳಿತಾಯ ಹಣವನ್ನು ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸಿ.ಎನ್. ಹೊಳೆಹೊಸೂರು ಪ್ರಾಸ್ತಾವಿಕ ಮಾತನಾಡಿ, ತಾಲೂಕಿನಲ್ಲಿ 813 ಸ್ತ್ರೀ ಶಕ್ತಿ ಸಂಘಗಳಿದ್ದು, 13 ಸಾವಿರ ಮಹಿಳೆಯರು ಸದಸ್ಯತ್ವ ಪಡೆದಿದ್ದು, ಹಲವಾರು ಸಂಘಗಳು ಸರ್ಕಾರ ನೀಡುವ ಸುತ್ತುನಿಧಿ ಸೌಲಭ್ಯ ಪಡೆದು ಸದೃಢವಾಗಿವೆ. ಈ ಸಂಘಗಳು 7.74 ಲಕ್ಷ ಉಳಿತಾಯ ಹಣವನ್ನು ಬ್ಯಾಂಕಿನಲ್ಲಿ ಇಡಲಾಗಿದೆ. ಅದರಲ್ಲಿ ರು. 46 ಲಕ್ಷ ಸಾಲ ಪಡೆಯಲಾಗಿದೆ ಎಂದರು.
ಈ ಸಂದರ್ಭ ತಾಪಂ ಅಧ್ಯಕ್ಷೆ ಗದಿಗೆವ್ವ ಬಿದರಿ, ಜಿಪಂ ಸದಸ್ಯರಾದ ಶಾಂತಮ್ಮ ಹಾದಿಮನಿ, ಸುಜಾತಾ ಕೊಟಗಿಮನಿ, ಬಸಮ್ಮ ಅಬಲೂರ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಅಣ್ಣಪ್ಪನವರ, ತಾಪಂ ಸದಸ್ಯ ಶಿವಪ್ಪ ಗಡಿಯಣ್ಣನವರ, ನಾಗರತ್ನಾ ಕಂಕನವರ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ರಾಘು ಮಾಳಮ್ಮನವರ, ಶಿವಕುಮಾರ ತಿಪ್ಪಶೆಟ್ಟಿ, ಮಮತಾ ಮಳವಳ್ಳಿ, ಗೀತಾ ದಂಡಗೀಹಳ್ಳಿ, ಮಹೇಶ ಗುಬ್ಬಿ, ತಾಪಂ ಇಒ ಎಂ.ಎನ್. ಮಾಳಿಗೇರ, ಪಪಂ ಮುಖ್ಯಾಧಿಕಾರಿ ಎಂ.ಎಚ್. ರಾಜಕುಮಾರ, ಜಿ.ಬಿ. ಮುತ್ತಗಿ, ಯೋಜನಾ ವ್ಯವಸ್ಥಾಪಕ ಎಸ್.ಎಚ್. ತಿಮ್ಮೇಶಕುಮಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶ್ರೀನಿವಾಸ ಆಲದರ್ತಿ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ-ಶಕ್ತಿ ಸಂಘದ ಮಹಿಳೆಯರು ಉಪಸ್ಥಿತರಿದ್ದರು.