ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿ
ಹಿರೇಕೆರೂರು: ಉತ್ತರಾಖಂಡದಲ್ಲಿ ನೆರೆ ಸಂತ್ರಸ್ತರಾದ ಹಾಗೂ ನಿರ್ವಸಿತರಾದವರಿಗೆ ತಾಲೂಕಿನ ಚಿಕ್ಕೆರೂರಿನ ಜೆಸಿಐ ಸಂಸ್ಥೆಯವರು ಪರಿಹಾರ ಹಣಕ್ಕೆ ದೇಣಿಗೆ ಸಂಗ್ರಹಿಸಿದರು.
ಈ ಸಂದರ್ಭ ಜೆಸಿಐ ಅಧ್ಯಕ್ಷ ನವೀನ ಶೆಟ್ಟರ್ ಮಾತನಾಡಿ, ಉತ್ತರಾಖಂಡ ಯಾತ್ರೆಯಲ್ಲಿ ಪ್ರಾಣ ಕಳೆದುಕೊಂಡ ಹಾಗೂ ಅಪಾಯದಿಂದ ಬದುಕುಳಿದ ಅಸಂಖ್ಯೆ ಜನತೆಗೆ ಸಹಾಯ, ಸಹಕಾರ ನೀಡುವುದು ಪುನಃ ಅವರ ಬದುಕು ರೂಪಿಸಲು ನೆರವು ನೀಡುವುದು ಸಮುದಾಯದ ಕರ್ತವ್ಯ ಎಂದರು. ಪರಿಹಾರನಿಧಿ ಸಂಗ್ರಹಣೆಗೆ ಬಸ್ ನಿಲ್ದಾಣ ಬಳಿ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಮನೋಜಕುಮಾರ ರೇವಣಕರ ಚಾಲನೆ ನೀಡಿ ಮಾತನಾಡಿ, ಜೆಸಿಐ ಸಂಸ್ಥೆಯವರು ನೆರೆ ಸಂತ್ರಸ್ತರ ಬಗ್ಗೆ ಹೆಚ್ಚಿನ ನಿಗಾವಹಿಸಿ ಕಷ್ಟದಲ್ಲಿರುವ ಜನತೆಗೆ ಸಹಾಯ ಸಲ್ಲಿಸುತ್ತಿರುವ ಈ ಕಾರ್ಯ ಶ್ಲಾಘನೀಯ. ಸಂಸ್ಥೆಯ ಇಂತಹ ಸಾಮಾಜಿಕ ಕಾರ್ಯಗಳತ್ತ ಹೆಚ್ಚಿನ ಕಾರ್ಯಗಳನ್ನು ಪೂರೈಸಲಿ ಎಂದರು.
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೆಸಿಐ ಸಂಸ್ಥೆ ಸದಸ್ಯರು, ವ್ಯಾಪಾರಸ್ಥರು, ಯುವಕರು, ವಿವಿಧ ಸಂಘ ಸಂಸ್ಥೆಗಳವರು ಪರಿಹಾರ ಹಣ ಸಂಗ್ರಹಣೆಗೆ ನೆರವು ನೀಡಿದರು. ಈ ಸಮಯದಲ್ಲಿ ಸಂಗ್ರಹವಾದ ರು. 17,520 ಮೊತ್ತದ ಡಿಡಿಯನ್ನು ಹಾವೇರಿ ಜಿಲ್ಲಾಧಿಕಾರಿ ಮುಖಾಂತರ ಉತ್ತರಾಖಾಂಡ ಸಂತ್ರಸ್ತರಿಗೆ ರವಾನಿಸಲಾಯಿತು. ಸಂತ್ರಸ್ತರ ಪರಹಾರ ನಿಧಿ ಸಂಗ್ರಹಣೆಯಲ್ಲಿ ಜೆಸಿಐ ಸದಸ್ಯರಾದ ಅರುಣಕುಮಾರ ಶೆಟ್ಟರ್, ಸುರೇಶ ಕಂಪ್ಲಿ, ಸಂತೋಷ ಮಡಿವಾಳರ, ಪ್ರತಿಭಾ ಕಂಪ್ಲಿ, ದಾನೇಶ್ವರಿ ವಾರದ, ಪ್ರಶಾಂತ ಗುತ್ತಲ, ಮುರುಳಿ ಶೆಟ್ಟರ್, ಅಮಿತ ಹೊಳಲ್ಕೆರೆ, ಶಾರದಾ ಗೋಪಾಲ, ಮುರುಗೇಶ ವಾರದ, ಸೋಮು ಗುಮನಾಳ, ಗ್ರಾಮದ ನಾಗರಿಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.