ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಬಕಾರಿ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಲಂಬಾಣಿ ತಾಂಡಾದ ಜನರಿಂದ ಠಾಣೆಗೆ ಮುತ್ತಿಗೆ

Vishwanath S
Updated On : 6 Jul 2013, 12:54 pm

ಅಮೀನಗಡ: ಅಬಕಾರಿ ಸಿಬ್ಬಂದಿ ಕಳ್ಳ ಭಟ್ಟಿ ಪರಿಶೀಲನೆ ನೆಪದಲ್ಲಿ ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಗೂಂಡಾಗಿರಿ ನಡೆಸುತ್ತಿದ್ದಾರೆ. ಮಹಿಳೆ, ಮಕ್ಕಳೆನ್ನದೇ ಎಲ್ಲರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಆರೋಪಿಸಿ ಇಲ್ಲಿಯ ಲಂಬಾಣಿ ತಾಂಡಾದ ಜನರು ಗುರುವಾರ ರಾತ್ರಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಸಮವಸ್ತ್ರ ಸಹ ಧರಿಸದ ಅಬಕಾರಿ ಸಿಬ್ಬಂದಿ ಪ್ರತಿ ಬಾರಿ ರಾತ್ರಿಯೇ ಮನೆಗಳಿಗೆ ನುಗ್ಗುತ್ತಾರೆ. ತಾಂಡಾದ ಜನರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಮಹಿಳೆ, ಮಕ್ಕಳಿಗೂ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಾರೆ. ಗುರುವಾರ ರಾತ್ರಿಯೂ ಇಂಥ ಘಟನೆ ಮರುಕಳಿಸಿದೆ. ಹೀಗಾದರೆ ನಮಗೆ ನ್ಯಾಯ ನೀಡುವವರಾರು ಎಂದು ತಾಂಡಾದ ಜನರು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು. ನಾವೇನು ಗೂಂಡಾಗಳಲ್ಲ, ನಕ್ಸಲರಲ್ಲ, ಭಯೋತ್ಪಾದಕರಲ್ಲ. ನಮ್ಮ ಮೇಲೆ ಯಾಕೆ ಈ ದೌರ್ಜನ್ಯ. ತಪ್ಪುಮಾಡಿದ್ದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ, ಶಿಕ್ಷೆ ನೀಡಲಿ. ಆದಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳುವ ತಾಂಡಾದ ಜನರು ನಾವು ಈ ಅನ್ಯಾಯ ಪ್ರತಿಭಟಿಸಿದರೆ ನಮ್ಮ ವಿರುದ್ಧವೇ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಮನೆಯಲ್ಲಿ ಯಾವುದೇ ಕಳ್ಳ ಭಟ್ಟಿ ಮದ್ಯದ ಪರಿಕರ ಸಿಗದಿದ್ದರೂ ಹಣ ನೀಡುವಂತೆ ಪೀಡಿಸುತ್ತಾರೆ. ಹಣ ನೀಡಿದರೆ ಸುಮ್ಮನೆ ಹೋಗುತ್ತಾರೆ. ಇಲ್ಲದಿದ್ದರೆ ಕೇಸ್ ಹಾಕುತ್ತಾರೆ. 25 ಸಾವಿರಕ್ಕೆ ಬೇಡಿಕೆ ಇಡುತ್ತಾರೆ ಎಂದರು. ಸ್ಥಳಕ್ಕೆ ಆಗಮಿಸಿದ ಹುನಗುಂದ ಸಿಪಿಐ ಶರಣಪ್ಪ, ಅಬಕಾರಿ ಇಲಾಖೆಯವರಿಗೆ ಮಾನವೀಯತೆಯಿಂದ ವರ್ತಿಸಲು ಅವರಿಗೆ ತಾಕೀತು ಮಾಡುತ್ತೇನೆ. ಇನ್ನು ಮುಂದೆ ಸ್ಥಳಕ್ಕೆ ಮಹಿಳಾ ಸಿಬ್ಬಂದಿ ಕಳಿಸುತ್ತೇನೆ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement